Wednesday, March 23, 2011

ಒಂದು ಸ್ಪಷ್ಟೀಕರಣ

ಈ ಲೇಖನವನ್ನು ಬರೆಯುತ್ತಿರುವ ಉದ್ದೇಶವೆಂದರೆ, ಪತ್ರಿಕೆಯ್ಒಂದರಲ್ಲಿ ಪ್ರಕಟವಾದ ನನ್ನ ಒಂದು ಅಭಿಪ್ರಾಯದ ಬಗ್ಗೆ ಕೆಲವರಿಗಿದ್ದ ಗೊಂದಲಗಳೂ ಮತ್ತು ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸುವುದು.

೧೭/೦೩/೨೦೧೧ರಂದುನಮ್ಮ ಮನೆಗೆ ಪತ್ರಕರ್ತರು ಬಂದಿದ್ದರು. ಅವರು ಕನ್ನಡ ಓದಬಲ್ಲ ಈಸ್ಪೀಕ್ ತಂತ್ರಾಂಶದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನ ಸಂದರ್ಶನ ಪಡೆದರು. ಸಂದರ್ಶನ ಮುಗಿದ ಮೇಲೆ ನಾನು ಮತ್ತು ಅವರು ಸ್ವಲ್ಪ ಹೊತ್ತು ಸುಮ್ಮನೆ ಲೋಕಾಭಿರಾಮ ಮಾತನಾಡುತ್ತಿದ್ದೆವು.
ಆ ಸಂದರ್ಬದಲ್ಲಿ ಬೇರೆ ಬೇರೆ ವಿಚಾರಗಳನ್ನೂ ನನ್ನ ಜೊತೆ ಚರ್ಚಿಸಿದರು. ಆಗ ತಾನೆ ಮುಗಿದಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಕೇಳಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ತಿಳಿದುಕೊಂಡ ನಾನು ಸಹಜವಾಗಿಯೇ ಸ್ವಲ್ಪ ಅಸಮಧಾನಗೊಂಡಿದ್ದೆ. ಅವರಿಗೆ ನಾನು ‘ಒಂದು ಭಾಷೆ ಬೆಳೆಯಲು ಅದನ್ನು ಜ್ಞಾನದಿಂದ ತುಂಬಬೇಕೇ ಹೊರತು ಸಮ್ಮೇಳನಗಳಿಂದಲ್ಲ. ಸಮ್ಮೇಳನಗಳನ್ನು ಮಾಡಲು ದುಡ್ಡು ಹಾಕುವ ಬದಲು ಕನ್ನಡ ಪುಸ್ತಕಗಳಿಗೆ ಸಹಾಯ ಧನ ನೀಡಬಹುದಿತ್ತು. ಇಂಗ್ಲೀಶ್ ಆಗಲಿ, ಮತ್ತಿತರೇ ವೇಗದಿಂದ ಬೆಳೆಯುತ್ತಿರುವ ಭಾಷೆಗಳಿಗೇನು ಸಮ್ಮೇಳನ ಮಾಡುತ್ತಾರಾ?‘ ಎಂದು ಕೇಳಿದ್ದೆ. ಇದರ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಅರ್ಥ ನಾನು ಸಮ್ಮೇಳನಗಳ ವಿರೋದಿ ಅಲ್ಲ. ಆದರೆ ಭಾಷೆಯನ್ನು ಬೆಳೆಸುವುದು ಮುಖ್ಯ. ಇದು ಸಮ್ಮೇಳನಗಳಿಂದ ಮಾತ್ರ ಸಾದ್ಯ ಎಂಬ ಕಲ್ಪನೆ ತಪ್ಪು ಎಂದು ಹೇಳಿದೆ ಅಷ್ಟೇ. . ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದು ಎರಡೇ ತಿಂಗಳೊಳಗೆ ವಿಶ್ವ ಕನ್ನಡ ಸಮ್ಮೇಳನದ ಅಗತ್ಯ ಏನಿತ್ತು? ಇರಲಿ, ನನ್ನ ವಿಚಾರ ಇಷ್ಟೇ; ಒಂದು ಭಾಷೆ ಬೆಳೆಯಲು ಅದು ಜ್ಞಾನದಿಂದ ಶ್ರೀಮಂತವಾಗಿರಬೇಕು ಮತ್ತೂ ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಯಾವುದೋ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಒಂದು ಭಾಷೆಯನ್ನು ಬಳಸಿಕೊಳ್ಳಬಾರದು. ಆಗ ಮಾತ್ರಾ ಅದು ಬೆಳೆಯಲು ಸಾದ್ಯ. ನಾನು ಈ ಲೇಖನವನ್ನು ಬರೆದ ಉದ್ದೇಶವೇನೆಂದರೆ, ಕೆಲವರು ಮೇಲೆ ಹೇಳಿದ ನನ್ನ ನಿಲುವನ್ನು ಠೀಕಿಸಿದ್ದರು, ಹಾಗು ನನ್ನನ್ನು ಸಮ್ಮೇಳನಗಳ ವಿರೋಧಿ ಎಂದೂ ಕರೆದರು. ಇದು ನನ್ನ ಮನಸ್ಸಿಗೆ ಕೊಂಚ ನೋವುಂಟು ಮಾಡಿರುವುದು ಸತ್ಯ; ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಾನು ಹೇಳುವ ಮಾತು ಇಷ್ಟೇ, ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚು ಜ್ಞಾನ ಬಂಡಾರವನ್ನು ತೆರೆದಿಡುವ ಪ್ರಯತ್ನ ನಡೆಯಬೇಕಾಗಿದೆ.. ಇದಕ್ಕೆ ಯಾರಿಗಾದರೂ ನಾನು ಸಹಾಯ ಮಾಡಬಹುದಾದರೆ ನಾನು ಧನ್ಯ. ಈಗ ನಾನು ಕೆಲವು ಸಣ್ಣ ಪುಟ್ಟ ಇಂಗ್ಲೀಶ್ ಕಥೆಗಳನ್ನು ಅನುವಾದಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಇದು ಇನ್ನೂ ಆರಂಭ ಅಷ್ಟೇ. ಮುಂದೆ ಕೆಲವು ಲೇಖನಗಳನ್ನೂ ಅನುವಾದ ಮಾಡುವ ಆಸೆ ಇದೆ. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಹೇಳಿದ ಈ ಮೇಲಿನ ಅಂಶಗಳು ಯಾರಲ್ಲಿ ಏನು ಅಭಿಪ್ರಾಯವನ್ನು ಉಂಟುಮಾಡಿದರೂ ಅದಕ್ಕೆ ನಾನು ಹೊಣೆಯಲ್ಲ. ಆದರೆ ನನ್ನ ಅಭಿಪ್ರಾಯ ಅಚಲ. ಇದು ಅಹಂಕಾರದ ಮಾತಲ್ಲ, ಇದು ಒಬ್ಬ ಸಾಮಾನ್ಯ ಕನ್ನಡಿಗನ ಕಳಕಳಿಯ ಮಾತು.

ನಿಮ್ಮವ, ಶ್ರೀಧರ್ ಟೀ ಎಸ್.

No comments:

Post a Comment