Tuesday, January 5, 2016

ಮತ್ತೊಮ್ಮೆ ಸುಮ್ನೆ ಹರಟೆ (ಮರಳಿ ಬ್ಲಾಗಿಗೆ)

ಎಲ್ಲರಿಗೂ ೨೦೧೬ ನೆ ವರ್ಷದ ಶುಭಾಶಯಗಳು. ಈ ವರ್ಷ ನಮ್ಮೆಲ್ಲರ ಸಮಸ್ಯೆಗಳನ್ನು ದೂರ ಮಾಡಿ, ಮನುಷ್ಯ-ಮನುಷ್ಯರುಗಳ ನಡುವಿನ ಸಂಬಂಧ ಹಾಗು ಭಾಂದವ್ಯಗಳನ್ನು ಉತ್ತಮಪಡಿಸಲಿ ಎಂದು ಆಶಿಸೋಣ. ನಾನು ಬಹಳ ದಿನಗಳ ನಂತರ ಈ ಬ್ಲಾಗಿನಲ್ಲಿ ಮತ್ತೆ ಬರೆಯುತ್ತಿದ್ದೇನೆ. ’ಯಾಕೆ ಇಷ್ಟು ದಿನ (ಹೆಚ್ಚೂ ಕಡಿಮೆ ೩ ವರ್ಷ) ಗಳ ಕಾಲ ನಾನು ಇಲ್ಲಿ ಬರೆಯಲಿಲ್ಲ’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿ ಉತ್ತರಿಸ ಹೊರಟರೆ, ನಾನು ಬರೆಯದಿದ್ದಕ್ಕೆ ಅನಗತ್ಯ ಸಮರ್ಥನೆಯನ್ನು ಕೊಡುವ ಕಾರ್ಯ ನನ್ನ ಪಾಲಿಗೇ ಬರುತ್ತದೆ. ಬಹುಶಃ ಆ ಕೆಲಸ ಬೇಡ. ಆದರೆ ಒಂದಂತೂ ನಿಜ, ನಾನು ಆರೋಗ್ಯವಾಗಿ, ಖುಷಿಯಾಗಿದ್ದೇನೆ. ಈಗ ಇದನ್ನು ಬರೆಯುತ್ತಿದ್ದೇನೆ ಎಂದಾದ ಮೇಲೆ, ಖಂಡಿತಾ ನಾನು ಬದುಕಿದ್ದೇನೆ! ಬೆಂಗಳೂರಿನ ಬದುಕು ಹಾಗು ಪ್ರಯಾಣ ನಾನು ಬೇರೆ ಕೆಲಸಗಳಿಗೆ ಮೀಸಲಿಡುತ್ತಿದ್ದ ಸಮಯವನ್ನು ಸ್ವಲ್ಪ ಮಟ್ಟಿಗೆ ತಿಂದು ಹಾಕಿರುವುದು ಸುಳ್ಳಲ್ಲ. ಜೊತೆಯಲ್ಲಿ ನನ್ನ M.Sc ವ್ಯಾಸಂಗವೂ ಸ್ವಲ್ಪ ಹೆಚ್ಚೇ ಸಮಯವನ್ನು ಬೇಡುತ್ತದೆ. ಇರಲಿ, ಇಷ್ಟು ದಿನ ನಾನು ಬ್ಲಾಗಿನಿಂದ ದೂರವಿದ್ದುದು ಅಷ್ಟು ಸರಿಯಲ್ಲ ಎಂದು ನನಗನಿಸಿದೆ. ಆದರೆ, ಮತ್ತೆ ಬರೆಯಲು ಸುಮ್ನೆ ಏನಾದ್ರು ಬೇಕಲ್ಲ. ದೇಶ-ವಿದೇಶಗಳಲ್ಲಿ ಏನೇನೋ ನಡೆಯುತ್ತಿದೆ. ಸಾವು-ನೋವು, ಭಯೋತ್ಪಾದನೆ, ಹಿಂಸೆ, ಇವನ್ನು ನೋಡಿದರೆ ಮಾನವೀಯತೆ ಸತ್ತೇ ಹೋಗಿದೆ ಅನಿಸುತ್ತದೆ. ಇದನ್ನೆಲ್ಲ ಬರೆಯಲು ಅನೇಕರಿದ್ದಾರೆ, ಇದರ ತಲೆ ಬಿಸಿ ನನ್ನದಲ್ಲ. ಈಗ ನಾನು ಬರೆಯಹೊರಟಿರುವುದು ನಾನು ಇತ್ತೀಚೆಗೆ ಕೇಳಿದ ಒಂದು ಕನ್ನಡ ಸಿನಿಮಾ ಹಾಡಿನ ಬಗೆಗೆ. ಒಂದು ಹಾಡನ್ನು ವಿಮರ್ಶೆ ಮಾಡುವಷ್ಟು ಆಳವಾದ ಹಾಗು ವಿಸ್ತಾರವಾದ ಜ್ಞಾನ ನನಗಿದೆ ಎಂದು ನನಗನಿಸುತ್ತಿಲ್ಲ. ಆದರೆ, ಆ ಹಾಡು ನನ್ನನ್ನು ಹೇಗೆ ಮುಟ್ಟಿತು ಎಂದಷ್ಟೇ ನಾನು ಹೇಳಬಲ್ಲೆ. ನನಗೆ ಯೋಗರಾಜ ಭಟ್ಟರ ಹಾಡುಗಳು ತುಂಬಾ ಇಷ್ಟ. ನಾನು ಕೇಳಿದಂತೆ ಹಾಗು ಅರ್ಥೈಸಿಕೊಂಡಂತೆ ಅವರ ಹಾಡುಗಳಲ್ಲಿ ತಿಳಿ ಹಾಸ್ಯದ ಮೂಲಕ ತತ್ವಜ್ಞಾನದ ದರ್ಶನವಿರುತ್ತದೆ. ನನಗೆ ಭಟ್ಟರ ’ಡ್ರಾಮ’ ಸಿನಿಮಾದ ’ಬೊಂಬೆ ಆಡ್ಸೋನು’ ಹಾಡು ಜೀವನದ ಸತ್ಯವನ್ನು ಹೇಳುವ ಕಿರುಹೊತ್ತಿಗೆಯಂತೆ ಕಾಣುತ್ತದೆ. ಪರಮಾತ್ಮ ಸಿನಿಮಾದ ’ಕತ್ಲಲ್ಲಿ ಕರ್ಅಡಿಗೆ’ ಹಾಗೆಯೇ ಪಂಚರಂಗಿಯ ’ಲೈಫು ಇಷ್ಟೆನೆ’ ಹಾಡುಗಳು ಒಂದೊಂದು ತತ್ವಗಳನ್ನು ಹೇಳುತ್ತವೆ ಎಂಬುದು ನನ್ನ ಅನಿಸಿಕೆ. ಈ ಸಮಯಕ್ಕೆ ನನ್ನ ಮನ ಮುಟ್ಟಿದ ಮುಖ್ಯ ಹಾಡು ಅಂದರೆ, ’ಪರಪಂಚ’ ಸಿನಿಮಾಗಾಗಿ ಭಟ್ಟರು ಬರೆದ ’ಹುಟ್ಟಿದ ಊರನು ಬಿಟ್ಟು ಬಂದ ಮೇಲೆ’ ಹಾಡು. ಈ ಹಾಡು ಬಹುಶಃ ಅನಿವಾರ್ಯವಾಗಿ ನಗರ ಜೀವನದತ್ತ ಒಲಸೆ ಬಂದ ನನ್ನಂತವರ ಮನಸ್ಸಿನ ಒಳಗೆ ಹೋಗಿ ಈ ಬಗೆಯ ವಲಸೆಗೆ ಕಾರಣ ಹುಡುಕಲು ಹಚ್ಚದೇ ಇರದು. ಫೈರಿಂಗ್ ಶ್ಟಾರ್ ವೆಂಕಟ್ (ಹುಚ್ಚಾ ವೆಂಕಟ್) ಈ ಹಾಡಿಗೆ ಜೀವ-ಭಾವ ತುಂಬಿ ಹಾಡಿದ್ದಾರೆ. ನಾನು ನೋಡಿದ ಈ ಹಾಡಿನ ಪ್ರೋಮೋದಲ್ಲಿ ವೆಂಕಟ್ ಅವರು ತಮ್ಮ trademark ಶೈಲಿಯಲ್ಲಿ ಪಂಚಿಂಗ್ ಡೈಲಾಗುಗಳನ್ನು ಹೊಡೆದು ಸಖತ್ ಮಜಾ ಕೊಟ್ಟಿದ್ದಾರೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಈ Youtube ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ನೋಡಬಹುದು. ’ಪರಪಂಚ’ teamಗೆ ನನ್ನ ಕಡೆಯಿಂದ ಒಂದು ’all the best'

Sunday, December 30, 2012

Just to say happy new year


Hi friends, I am writing this on Jan 30, 2012. A day before 2012 ends. Now-a-days, I am writing in Kannada; and many of my friends asked me why I am writing only in Kannada. Some of them expressed their unhappiness as they could not read my writings and comprehend. So for them, now I am writing in English. Of course, I will write in Kannada very soon. Perhaps my first article of 2013 will be in Kannada. Friends, now we are preparing to say goodbye to 2012, and ready to welcome 2013. In Before telling any thing further, you must know why I took such a long brake from writing. Here is the answer: AActually there was a strong prediction of dooms day! therefore, I thought of not writing since it will go waste after the Dooms day; but unfortunately the Dooms day itself did not take place! Now I am compelled to write something at my will. Then I thought what I have to write. Though there are many events and incidents happening around us, I did not feel like picking up one and writing about that. Therefore, I am just penning down whatever the series of thought coming to my mind at this time. Hei, hei hang on, did you read correct? ‘penning’? Yep, I wrote wrong there. I never used the ‘pen’ to write in my life. why so? ok, leave it, thats a big tale then. Now correction, in place of ‘penning down’ you read as ‘typing down’ since I use computer to write down almost everything. I am using laptop to right now, and of course I have purchased a tablet running Android 4.0. Perhaps I will start using that for my day-to-day needs. Then hopefully I can reduce my too much dependancy on my laptop. I have many things to share with you all that happened to me in 2012, but now no mood. However, I was introduced to Android OS in this year, first purchased on android smart phone from Motorola, and now a tablet from Iberry. And of course not to forget, I got a job in 2012! o, not one, but 2! I will share all those details in my next post, stay tuned! Thanks for reading this rather boring stuff; and have a nice and prosperous new year ahead!

Wednesday, May 9, 2012

ಸೇದುವ ಸುಖ.......!


ಮೊನ್ನೆ ನಾನು ನನ್ನ ಪದವಿ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ನನ್ನ cousin ಮನೆಯಲ್ಲಿ ಕುಳಿತು ಹರಟುತ್ತಿದ್ದಾಗ ಅವನು ’ನನ್ನ್ ಸೇದದ್ ಎಲ್ಲ್ ಹೋತಾ?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ನನಗೆ ಕೊಂಚ ಸೋಜಿಗವೆನಿಸಿತು. ಏಕೆಂದರೆ ಅವನು ನನಗಿಂತಾ ಸುಮಾರು ೫-೬ ವರ್ಷ ಸಣ್ಣವನು. ಅಲ್ಲದೇ ನಾನು ನನ್ನ ಜೀವನದಲ್ಲಿ ಸೇದುವುದಕ್ಕಾಗಿ ಹಂಬಲಿಸಿದವನಲ್ಲ, ಹಪಹಪಿಸಿದವನೂ ಅಲ್ಲ. ನನಗಿಂತಾ ಸಣ್ಣವನು ನನ್ನ ಮುಂದೆಯೇ ಸೇದುವ ಇಚ್ಚೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದಾಗ ನನಗೆ ತಡೆಯಲು ಸಾಧ್ಯವಾಗಲಿಲ್ಲ. ಕೊಂಚ ಹೊತ್ತು ಅವನು ಅವನ ಸೇದುವ ಕಾರ್ಯದಲ್ಲಿ ಮಗ್ನನಾದ. ನಾನು ನನ್ನ ಪಾಡಿಗೆ ಯೋಚಿಸುತ್ತಾ ಕುಳಿತೆ. ತಟಕ್ಕನೆ ನನಗೆ ನನ್ನ ಹೈಸ್ಕೂಲ್ ಹೆಡ್‌ಮೇಷ್ಟ್ರು ’ಚಟವಿಲ್ಲದವನು ಚಟ್ಟಕ್ಕೆ ಸಮಾನ’ ಎಂದು ಹೇಳಿದ್ದು ನೆನಪಾಯಿತು. ನಾನು ಸೇದಿರದಿದ್ದರೆ ಯಾರೂ ಸೇದಬಾರದೆಂಬುದು ನನ್ನ ಹುಚ್ಚು ಕಲ್ಪನೆಯಲ್ಲವೇ? ಆದರೂ ನನಗಿಂತಾ ಸಣ್ಣವನು ಸೇದುವುದೆಂದರೇನು? ಅದನ್ನು ನಾನು ಅರಗಿಸಿಕೊಳ್ಳುವುದು ಹೇಗೆ? ನಾನು ಏಕೆ ಸೇದಲಿಲ್ಲ? ಓಹ್, ಅದು ನನ್ನದೇ ತಪ್ಪು. ನಾನೂ ಸೇದಬೇಕಾಗಿತ್ತು. ಅವನ ಸೇದುವ ಕಾರ್ಯ ಮುಗಿದ ಮೇಲೆ ನನ್ನ ಕುತೂಹಲವನ್ನು ತಡೆಯದೇ ’ಯಂತ ಅದು ಸೇದದೂ?’ ಎಂದೆ. ಅವನು ಮರು ಮಾತನಾಡದೆ ಆ ಸೇದುವ instrument ಅನ್ನು ನನ್ನ ಕೈಗೆ ಕೊಟ್ಟ! ಆಹಾ, ಆಹಾ, ಆಹಾ, ಯಂತಾ ಸುಖ! ಅದನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಬಿಡಿ! ಆದರೆ ಅದನ್ನು ಸೇದುತ್ತಿದ್ದಂತೆ ನನಗೆ ನಾನೂ ದಿನಾ ರಾತ್ರಿ ಸೇದುತ್ತಿರುವುದು ನೆನಪಾಯಿತು. ನಾನು ಸುಮಾರು ೩-೪ ವರ್ಷಗಳಿಂದ ನಿರಂತರವಾಗಿ ಸೇದಿಕೊಂಡು ಬರುತ್ತಿರುವುದು ಅರಿವಿಗೆ ಬಂದು, ನನ್ನದು ಯಂತಾ ಹುಚ್ಚು ಮನಸ್ಸು, ತುಂಬಾ ಯೋಚಿಸಿಬಿಟ್ಟೆ ಎಂದೆನಿಸಿತು. ಆದರೂ ಸೇದುವ ಸುಖ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿತ್ತು! ಸಾಕು, ಎಷ್ಟು ಸೇದುವುದು? ಎನಿಸಿ ಸೇದುವ instrument ಅನ್ನು ಅವನ ಕೈಗೆ ವಾಪಾಸು ಕೊಟ್ಟೆ. ’ಭಾರಿ ಖುಷೀ ಆತೋ ಮರಾಯಾ!’ ಎಂದೆ. ’ತಂಡೀ-ಗಿಂಡೀಯಲ್ಲಾ ಚೊಲೋ ಹೊಕ್ತೋ ಮರಯಾ’ ಎಂದೆ. ಅವನು ’ಹೌದಾ, ಇದು ರಾಶೀ ಹಳೆ ವಿಕ್ಸ್ inhaler ಮರಾಯ’ ಎಂದ. ಅದಕ್ಕೆ ನಾನು ’ನಾನೂ ಒಂದು inhaler ನ ದಿನಾ ರಾತ್ರೆ ಸೇದ್ತಿ’ ಎಂದೆ. ಆರೋಗ್ಯದಲ್ಲಿ ಏರು-ಪೇರು ಉಂಟಾದಲ್ಲಿ, ಗಂಟಲು ನೋವು ಬಂದಲ್ಲಿ, ಮೂಗು ಸೋರಲು ಶುರುವಾದಲ್ಲಿ, ದಯವಿಟ್ಟು ನೀವೂ ಸೇದಿ! ಸೇದುವಾಗ ನನ್ನ ಈ ಬರಹವನ್ನು ದಯವಿಟ್ಟು ಒಮ್ಮೆ ನೆನಪಿಸಿಕೊಳ್ಳಿ! ಸೇದಿ-ಸೇದಿಸಿ, ಶೀತ ಓಡಿಸಿ!

Sunday, April 29, 2012

ಒಂದು ಸೂಚನೆ

ಸ್ನೇಹಿತರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಬಹಳ ದಿನಗಳನಂತರ ನಾನು ಮತ್ತೆನನ್ನ ಬ್ಲಾಗಿನಲ್ಲಿ ಬರೆಯುತ್ತಿದ್ದೇನೆ. ಕಾರ್ಯದ ಒತ್ತಡ, ಹಾಗು ಕೆಲವು Commitmentಗಳು ಇದ್ದ ಕಾರಣ ನಾನು ಬ್ಲಾಗ್ ಬರಹದಿಂದ ದೂರವಿದ್ದೆ. ಆದರೆ ನನ್ನ ಓದುಗರನ್ನು ನೆನಪಿಸಿಕೊಂಡು ತುಸು ಬಿಡುವು ಮಾಡಿಕೊಂಡು ಇಲ್ಲಿ ಬಂದು ಬರೆಯುತ್ತಿದ್ದೇನೆ. ಇದರಿಲಿ, ನೀವೆಲ್ಲರೂ ಸೌಖ್ಯವಾಗಿದ್ದೀರೆಂಬ ನಂಬಿಕೆ ನನ್ನದು. ಸುಮಾರು ಮೂರು-ನಾಲ್ಕು ತಿಂಗಳುಗಳ ಕಾಲ Software developmentನ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದು ಈಗ ನನ್ನ ಪದವಿ ತರಗತಿಗಳ ಪರೀಕ್ಷೆಯನ್ನು ಎದುರಿಸುತ್ತಿದ್ದೇನೆ. ಆದರೆ ನಿಮ್ಮೆಲ್ಲರ ನೆನಪು ನನ್ನನ್ನು ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಇರಲಿ, ಇನ್ನು ಮುಂದೆ ಈ ಬ್ಲಾಗಿನ ಜೊತೆಗೆ ನನ್ನ ಲೇಖನಗಳು ಬೇಳೂರು ಸುದರ್ಶನ ಅವರ ಮಿತ್ರ ಮಾಧ್ಯಮ ಜಾಲ ತಾಣದಲ್ಲಿ ’ಒಳಗಣ್ಣು’ ಎಂಬ ಹೆಸರಿನ ಅಂಕಣದಲ್ಲಿ ಪ್ರಕಟವಾಗುತ್ತಿವೆ. ಅವನ್ನೂ ಓದಿ, ನಿಮ್ಮ ಪ್ರತಿಕ್ರಿಯೆಗಳನ್ನು ನೀಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನಗೆ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲರಿಗೂ, ವಿಶೇಷವಾಗಿ ನನಗೆ ಸ್ಫೂರ್ತಿ ತುಂಬಿ ನನಗೆ ವೇದಿಕೆಯನ್ನು ಒದಗಿಸಿಕೊಡುತ್ತಿರುವ ಭೇಳೂರೂ ಸುದರ್ಶನ ಅವರಿಗೆ ನಾನು ಚಿರಋಣಿ.

Friday, December 30, 2011

೨೦೧೧ ರ ನನ್ನ ಹಿನ್ನೋಟನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.

೨೦೧೦ ರ ಡಿಸೆಂಬರ್‌ನಲ್ಲಿ ನಾನು ಮಾಡುತ್ತಿದ್ದ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಕೆಲಸಕ್ಕೆ ಗುಡ್‌ಬೈ ಹೇಳಿಬಿಟ್ಟೆ! ಮುಂದೇನು ಎನ್ನುವ ಯೋಚನೆಗೆ ಆಸ್ಪದವಿಲ್ಲದಂತೆ ಈಸ್ಪೀಕ್ ತಂತ್ರಾಂಶದಲ್ಲಿ ಕನ್ನಡ ಸೇರಿಸಲು ಕೆಲಸ ಮಾಡುವ ಅವಕಾಶ ಸಿಕ್ಕಿತು. ೨೦೧೧ ರ ಆರಂಭದಲ್ಲಿ ಬರಹದಲ್ಲಿ ಕನ್ನಡ ಬೆರಳಚ್ಚು ಮಾಡುವುದನ್ನು ಕಲಿಯಲು ಪ್ರಾರಂಭಿಸಿದೆ. ಇದಕ್ಕೆ ನನ್ನ ತಂದೆಯವರು ಸಹಾಯ ಮಾಡಿದರು. ಈ ಮಧ್ಯೆ, ನನಗೆ ಕರ್ನಾಟಕ ಸರಕಾರ ಹಾಗು ಕೆಲವು ಎನ್‌ಜೀಓ ಗಳು ಸೇರಿ ಜನವರಿಯಲ್ಲಿ ನಡೆಸಿದ ಐಟೀ ಫಾರ್ ದಿ ಡಿಸೇಬಲ್ಡ್ ವಿಚಾರ ಘೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ತಮಿಳುನಾಡಿನ ನನ್ನ ಸ್ನೇಹಿತರಿಂದ ಸಿಕ್ಕಿತು. ಅಲ್ಲಿ ಅನೇಕ ವ್ಯಕ್ತಿಗಳ ಪರಿಚಯವಾಯಿತು. ಆ ಎಲ್ಲಾ ಕಥೆಯನ್ನು ನಿಮಗೆ ಹೇಳುತ್ತಾ ಕುಳಿತರೆ ಒಂದು ಸಣ್ಣ ಕಿರುಹೊತ್ತಿಗೆಯನ್ನೇ ಬರೆಯಬಹುದು! ಇರಲಿ, ಅದರಿಂದ ನನ್ನ ಸ್ನೇಹಿತ ವರ್ಗ, ಹಾಗು ನನ್ನ ತಿಳುವಳಿಕೆ ಹೆಚ್ಚಾಯಿತು ಎನ್ನುವುದು ಮಾತ್ರ ಸತ್ಯ. ಈ ಸಮಯದಲ್ಲಿ ನನಗೆ ತಮಿಳುನಾಡಿನ ತರ್ಡ್‌ ಐ ಟೆಕ್ನಿಕಲ್ ವಾಲೆಂಟರಿ ಗ್ರೂಪಿನ ಬಗೆಗೆ ತಿಳಿಯಿತು. ಅದಾದ ನಂತರ ಜನವರಿ ಅಂತ್ಯದಲ್ಲಿ ನನ್ನ ಬಗ್ಗೆ ಹಾಗೂ ಈಸ್ಪೀಕ್ ಕನ್ನಡದ ಬಗ್ಗೆ ಅಬಸಿ ಶ್ರೀನಾಥ್ (ನನ್ನ ತಂದೆ) ಬರೆದ ಲೇಖನವೊಂದು ದಟ್ಸ್‌ಕನ್ನಡ ಪೋರ್ಟಲ್‌ನಲ್ಲಿ ಪ್ರಖಟವಾಯಿತು. ಅಲ್ಲಿಂದ ನನ್ನ ಸ್ನೇಹಿತ ವರ್ಗ ಮತ್ತೂ ದೊಡ್ಡದಾಯಿತು ಕೆಲ ಗೆಳೆಯರ ವತ್ತಾಯದ ಮೇರೆಗೆ ನಾನೂ ಫೇಸ್‌ಬುಕ್‌ಗೆ ಬಂದೆ! ಅದುವರೆಗೆ ಕೇವಲ ಆರ್ಕುಟ್ ಬಳಸುತ್ತಿದ್ದೆ. ನನ್ನ ತಮ್ಮ ವಿನಾಯಕನ ನೆರವಿನಿಂದ ಫೇಸ್‌ಬುಕ್ಕಿನ ಕೆಲವು ಫೀಚರುಗಳನ್ನು ತಿಳಿದುಕೊಂಡೆ. ಅದಾದನಂತರ ಮಾರ್ಚಿನಲ್ಲಿ ನನ್ನ ಬಗ್ಗೆ ಹಾಗು ಕನ್ನಡ ಈಸ್ಪೀಕ್‌ನ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನೇ ಬರೆದುಕೊಂಡೆ! ಈ ಸಮಯದಲ್ಲಿಯೇ ಕನ್ನಡಕ್ಕಾಗಿ ಕೆಲಸಮಾಡುತ್ತಿರುವ ಡಾ|| ಪವನಜ ಅವರ ಪರಿಚಯ ಅನಿರೀಕ್ಷಿತವಾಗಿ ಫೋನಿನಲ್ಲಾಯಿತು. ಅದಾದ ನಂತರ ಪೂರ್ಣಪ್ರಜ್ಞ ಬೇಳೂರು ಅವರು ನಮ್ಮ ಮನೆಗೆ ಕೆಲವು ಪತ್ರಕರ್ತರನ್ನು ಕರೆತಂದರು. ಅವರು ನನ್ನ ಸಂದರ್ಶನ ಪಡೆದರು. ನನ್ನ ಕುರಿತಾಗಿ ಪ್ರಜಾವಾಣಿ, ಹೊಸದಿಗಂತ, ಕನ್ನಡಪ್ರಭ, ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳಲ್ಲಿ ಲೇಖನಗಳು ಬಂದವು. ಇದಾದ ನಂತರ ನನ್ನ ಸ್ನೇಹಿತ ವರ್ಗ ಇನ್ನೂ ಹೆಚ್ಚಾಯಿತು. ಪೂರ್ಣಪ್ರಜ್ಞ ಅವರು ಬೇಳೂರು ಸುದರ್ಶನ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಸುದರ್ಶನ ಅವರು ಆ ಸಮಯದಲ್ಲಿ ಕರ್ನಾಟಕ ಜ್ಞಾನ ಆಯೋಗದ ಕಣಜ ಜಾಲತಾಣದ ಸಮನ್ವಯಕಾರರಾಗಿದ್ದರು. ಅವರು ಈಸ್ಪೀಕ್ ಕನ್ನಡ ಆವೃತ್ತಿಯನ್ನು ಕಣಜ ಜಾಲತಾಣದಲ್ಲಿ ಸೇರಿಸಿಕೊಂಡರು. ಈ ಮಧ್ಯೆ, ಸಾಗರದ ಸರಕಾರಿ ನೌಕರರ ಸಂಘದ ಅಧ್ಯಕ್ಶರಾಗಿರುವ ಮಾಸಾ ನಂಜುಂಡಸ್ವಾಮಿಯವರು ನನಗೆ ಪರಿಚಯವಾದರು. ಅವರು ಸರಕಾರಿ ನೌಕರರ ಸಂಘ ಏಪ್ರಿಲ್ ನಲ್ಲಿ ಸಾಗರದಲ್ಲಿ ನಡೆಸಿದ ‘ಪೀಯೂಸಿ ನಂತರ ಮುಂದೇನು’ ಪಿಯೂಸೀ ವಿದ್ಯಾರ್ಥಿಗಳಿಗೆ ನಡೆಸಿದ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ನನ್ನಿಂದಲೇ ಆ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದರು. ಇದೇ ಸಮಯದಲ್ಲಿ ನಮ್ಮೂರಿನವರೇ ಆದ ದಿನೇಶ್ ಜೋಷಿ ಅವರ ಒಡನಾಟಕ್ಕೆ ಬಂದೆ. ಶಿವಮೊಗ್ಗದ ಪ್ರೊಫೆಸರ್ ಶಾಸ್ತ್ರೀ ಅವರ ಪರಿಚಯವಾಯಿತು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿರುವ ತರ್ಡ್ ಐ ಟೆಕ್ನಿಕಲ್ ವಾಲೆಂಟರೀ ಗ್ರೂಪಿನ ಕಾರ್ಯದರ್ಶಿ ಅವರ ಮನೆಗೆ ಹೋಗಿದ್ದೆ. ಅವರು ನನಗೆ ತರ್ಡ್ ಐ ಪರವಾಗಿ ಒಂದು ಜಿಪೀಎಸ್ ಸಾಧನವನ್ನು ಉಡುಗೊರೆಯಾಗಿಕೊಟ್ಟರು. ಹವ್ಯಕ ಸಾಗರ ಸಂಸ್ಥೆಯವರು ಜೂನ್ ತಿಂಗಳಿನಲ್ಲಿ ಅವರ ಒಂದು ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಮಾಡಿದರು. ಇದಾದ ನಂತರ ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ವಿಪ್ರ ನೌಕರರ ಸಂಘದ ಒಂದು ಕಾರ್ಯಕ್ರಮವನ್ನು ನಂಜುಂಡಸ್ವಾಮಿಯವರು ನನ್ನಿಂದಲೇ ಉದ್ಘಾಟನೆ ಮಾಡಿಸಿದರು. ಕಣಜ ಯೋಜನೆಯವರು ಅದೇ ತಿಂಗಳಿನಲ್ಲಿ ಕನ್ನಡ ಈಸ್ಪೀಕ್ ತಂತ್ರಾಂಶಕ್ಕಾಗಿ ನಾನು ಮಾಡಿದ ಕೆಲಸಕ್ಕೆ ಒಂದು ಪ್ರಮಾಣಪತ್ರವನ್ನು ನೀಡಿದರು. ಇದಾದ ನಂತರ ಸುದರ್ಶನ ಅವರು ಕಣಜ ಯೋಜನೆಯ ಪರವಾಗಿ ನನ್ನನ್ನು ಸಮರ್ಥನಾಮ್ ಎಂಬ ಎನ್‌ಜೀಒ ದಲ್ಲಿ ಕನ್ನಡ ತಂತ್ರಾಂಶವನ್ನು ತೋರಿಸಲು ಕರೆದುಕೊಂಡು ಹೋಗಿದ್ದರು. ಇದೇ ತಿಂಗಳಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಅವರು ತಯಾರಿಸುತ್ತಿರುವ ಒಂದು ಕನ್ನಡ ತಂತ್ರಾಂಶದ ಪರೀಕ್ಷೆಗಾಗಿ ನನ್ನನ್ನು ಸುಮಾರು ಒಂದು ತಿಂಗಳುಗಳ ಕಾಲ ಕರೆಸಿಕೊಂಡರು. ಅಗಷ್ಟ್ ತಿಂಗಳಿನಲ್ಲಿ ಸೊರಬದಲ್ಲಿ ನಡೆದ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಒಂದು ಸನ್ಮಾನ ಮಾಡಿದರು. ಇದಕ್ಕಾಗಿ ನಾನು ಸೊರಬ ತಾಲ್ಲೂಕು ಸಾಹಿತ್ಯ ಪರಿಶತ್ತೂ, ಶಾಸಕ ಹಾಲಪ್ಪನವರು, ಹಾಗು ಪತ್ರಕರ್ತ ಮಿತ್ರರಾದ ಉಮೇಶ್ ಬಿಚ್ಚುಗತ್ತಿ, ಶ್ರೀಪಾದ ಬಿಚ್ಚುಗತ್ತಿ, ಹಾಗು ದಿನಕರ ಭಟ್ ಭಾವೆ, ಮತ್ತಿತರರಿಗೆ ಕೃತಜ್ಞ. ಬೇಳೂರು ಸುದರ್ಷನ ಅವರ ಜೊತೆ ಟಿವಿ೯ ರಲ್ಲಿ ‘ಕನ್ನಡ ದ ಕಣಜ’ ಎಂಬ ಒಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇದರ ಜೊತೆಗೆ ಕನ್ನಡ ಓಸೀಆರ್ ತಂತ್ರಾಂಶ ತಯಾರಿಸುತ್ತಿರುವ ಮೈಸೂರಿನ ಪ್ರೊಫೆಸರ್ ಯೋಗಾನಂದ ಅವರನ್ನು ಸುದರ್ಶನ ಅವರು ಪರಿಚಯಿಸಿದರು. ಮೈಸೂರಿನಲ್ಲಿ ಡಾ|| ಪವನಜ ಅವರನ್ನು ಬೇಟಿಯಾಗುವ ಅವಕಾಶ ಸಿಕ್ಕಿತು. ಸಿದ್ಧಾಪುರದ ನನ್ನ ಹಳೆಯ ಶಾಲೆಯ ಸ್ಥಾಪಕರು ನನ್ನನ್ನು ಕರೆದು ನನಗೆ ಸನ್ಮಾನಿಸಿದರು. ಒಬ್ಬ ವ್ಯಕ್ತಿಗೆ ತಾನು ಓದಿದ ಹಳೆಯ ಶಾಲೆಯವರು ತನ್ನನ್ನು ಗುರುತಿಸುವುದಕ್ಕಿಂತಾ ದೊಡ್ಡ ಸೌಭಾಗ್ಯ ಇನ್ನೇನಿದೆ?!

ಇದೆಲ್ಲಾ ನಡೆಯುತ್ತಿರುವಂತೆ ಕಂಪ್ಯೂಟರಿನಲ್ಲಿ ಹೆಚ್ಚಿನದನ್ನು ಕಲಿಯ ಬೇಕೆಂಬ ನನ್ನ ಆಸಕ್ತಿ ಹೆಚ್ಚಾಯಿತು. ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ (c c++ java) ಸರಿಯಾಗಿ ಕಲಿಯಲು ಪ್ರಯತ್ನ ಆರಂಭಿಸಿದೆ. ಈ ಸಮಯದಲ್ಲಿ ನನ್ನ ಸೋದರ ಮಾವ (ಸಂದೇಶ್) ಅವರು ಕೆಲವರನ್ನು ಬೇಟಿ ಮಾಡಿ ನನಗೆ ಅವಕಾಶವನ್ನು ಒದಗಿಸಿಕೊಟ್ಟರು. ಬೆಂಗಳೂರಿನ ಅವರ ಮನೆಯಲ್ಲಿಯೇ ನನಗೆ ಆಶ್ರಯ ಕೊಟ್ಟು ನನ್ನ ಕಂಪ್ಯೂಟರ್ ತರಗತಿಗಳಿಗೆ ಹೋಗಿ ಬರಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರಋಣಿ.

ಡಿಸೆಂಬರ್ ತಿಂಗಳಿನಲ್ಲಿ ಸಾಗರದ ಬಳಿಯ ಹೊಂಗಿರಣ ಶಾಲೆಯ ವಾರ್ಷಿಕೋತ್ಸವದ ವಿಜ್ಞಾನೋತ್ಸವದ ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರು. ಇದಕ್ಕೆ ಕಾರಣ ಪೂರ್ಣಪ್ರಜ್ಞ ಬೇಳೂರುಅವರು. ಬೇಳೂರು ಸುದರ್ಶನ ಹಾಗು ಪೂರ್ಣಪ್ರಜ್ಞ ಬೇಳೂರು ಅವರುಗಳ ವೊತ್ತಾಯದ ಮೇರೆಗೆ ಡಾಕ್ಟ್ರ್ ಬಾತ್ರಾಸ್ ಪಾಸಿಟಿವ್ ಹೆಲ್ತ್ ಅವಾರ್ಡ್‌ಗೆ ಅರ್ಜಿ ಹಾಕಿದೆ. ಡಿಸೆಂಬರ್ ತಿಂಗಳಿನಲ್ಲಿ ಆ ಅವಾರ್ಡ್ ನನಗೆ ಸಿಕ್ಕಿತು.

ಈ ಲೇಖನದಲ್ಲಿ ನನಗೆ ಪ್ರೀತಿ ತೋರಿಸಿದ ಎಲ್ಲಾ ಸ್ನೇಹಿತರ/ಹಿರಿಯರ ಹೆಸರು ಹಾಕಲು ಸಾಧ್ಯವಾಗಿಲ್ಲ. ಅವರೆಲ್ಲರನ್ನೂ ಅದಕ್ಕಾಗಿ ಕ್ಷಮೆ ಕೇಳುತ್ತೇನೆ.

ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ನನಗೆ ವಿದ್ಯಾ ದಾನ ಮಾಡಿದ ಎಲ್ಲಾ ಗುರುಗಳಿಗೂ, ನನ್ನ ತಂದೆ-ತಾಯಿಯರಿಗೂ, ನನ್ನ ಮನೆಯ ಎಲ್ಲರಿಗೂ, ನನ್ನ ಸೋದರಮಾವ ಸಂದೇಶ್ ಅವರಿಗೂ, ನಿಮ್ಮೆಲ್ಲರಿಗೂ ಈ ಸಂದರ್ಬದಲ್ಲಿ ವಂದಿಸಬಯಸುತ್ತೇನೆ.

೨೦೧೧ ನನ್ನ ಪಾಲಿಗಂತೂ ಒಂದು ಮರೆಯಲಾಗದ ವರ್ಷ. ಈ ಲೇಖನವನ್ನು ಮುಗಿಸುವ ಮುನ್ನ ೨೦೧೧ ವರ್ಷಕ್ಕೆ ನನ್ನ ಅಂತಿಮ ನಮನ. ಹೊಸ ವರ್ಷ ೨೦೧೨ ನಮ್ಎಲ್ಲರ ಬಾಳಿಗೂ ಹರುಷದ ಸುಧೆ ಹರಿಸಲಿ ಎಂದು ಆಶಿಸುತ್ತೇನೆ.

ಗಣಕದಲ್ಲಿ ಕನ್ನಡ

ಸಾಗರದ ಮಲೆನಾಡು ಮುದ್ರಕರ ಸಂಘದ ವಾರ್ಷಿಕ ಸಂಚಿಕೆಗೆ ನಾನು ಬರೆದ ಲೇಖನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.

‘ಕಂಪ್ಯೂಟರ್’ (ಗಣಕಯಂತ್ರ) ಎನ್ನುವ ಪದವನ್ನು ನಾವೆಲ್ಲರೂ ದಿನ ನಿತ್ಯದಲ್ಲಿ ಕೇಳಿಯೇ ಇರುತ್ತೇವೆ. ಯಾವುದೋ ಒಂದು ಖಾಸಗೀ/ಸರಕಾರಿ ಕೆಲಸಕ್ಕೆ ಬೇಕಾಗುವ ದಾಖಲೆಗಳನ್ನು ಮುದ್ರಣ ರೂಪದಲ್ಲಿ ಪಡೆಯುವುದರಿಂದ ಹಿಡಿದು ಚಲನಚಿತ್ರ ನೋಡುವ, ವಿವಿಧ ಆಟಗಳನ್ನು ಆಡುವ, ಬೇಕಾದ ಮಾಹಿತಿಗಳನ್ನು ಪ್ರಪಂಚದ ಹೆಚ್ಚೂ-ಕಡಿಮೆ ಯಾವುದೇ ಭಾಷೆಯಲ್ಲಿ ಪಡೆಯುವುದರವರೆಗೆ ಎಲ್ಲಾ ಕೆಲಸಕ್ಕೂ ಈ ‘ಗಣಕ ಯಂತ್ರ’ ಬೇಕು.

ಈ ‘ಗಣಕ ಯಂತ್ರ’ ವು ೨೦ ನೆಯ ಶತಮಾನದಲ್ಲಿ ವಿಜ್ಞಾನವು ಮನುಕುಲಕ್ಕೆ ನೀಡಿದ ಒಂದು ಅದ್ಬುತ ಹಾಗೂ ಅವಿಸ್ಮರಣೀಯ ಕೊಡುಗೆ. ಇದು ಎಂತಹಾ ಕ್ಲಿಷ್ಟಕರ ಸಮಸ್ಯೆಯನ್ನಾಗಲಿ ಕ್ಷಣಾರ್ಧದಲ್ಲಿ ಬಿಡಿಸಿ ಅದಕ್ಕೆ ಉತ್ತರವನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ಹೇಳುವುದಾದರೆ ಗಣಿತದ ಕೋಟಿಗಟ್ಟಲೇ ಸಂಖ್ಯೆಯನ್ನೊಳಗೊಂಡ ಲೆಕ್ಕವನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮಾಡಿ ಮುಗಿಸಿ ಅದರ ಉತ್ತರವನ್ನು ಬಳಕೆದಾರರಿಗೆ ನೀಡಬಲ್ಲದು. ಗಣಿತವಲ್ಲದೇ, ಪಠ್ಯ, ದೃಷ್ಯ, ಮತ್ತು ಧ್ವನಿಗಳಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡುವ ಮೂಲಕ ಮನುಷ್ಯನ ಕೆಲಸವನ್ನು ಬಹುಮಟ್ಟಿಗೆ ಕಡಿಮೆ ಮಾಡಿದೆ. ಕೋಟ್ಯಾಂತರ ಪುಟಗಳಷ್ಟು ಮಾಹಿತಿಯನ್ನು ತನ್ನ ಅತೀ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಗಣಕಯಂತ್ರಕ್ಕಿದೆ. ಇದು ಜಗತ್ತಿನ ಯಾವುದೇ ಭಾಷೆಯ ಮಾಹಿತಿಯನ್ನಾದರೂ ತನ್ನಲ್ಲಿ ಇಟ್ಟುಕೊಳ್ಳಬಲ್ಲದು.

ಗಣಕವು ಇಷ್ಟೆಲ್ಲಾ ಮಾಹಿತಿಯನ್ನು ಹೇಗೆ ತನ್ನ ಸಣ್ಣ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ? ಗಣಕಕ್ಕೆ ನಿರ್ಧಿಷ್ಟ ಕಾರ್ಯವನ್ನು ಮಾಡಲು ಸೂಚನೆ ಕೊಡುವುದು ಹೇಗೇ? ಗಣಕಕ್ಕೆ ತನ್ನದೇ ಭಾಷೆಯಿದೆಯೇ? ಇದ್ದರೆ ಅದು ನಮ್ಮ ವಿವಿಧ ಭಾಷೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ? ನಮ್ಮ ಕನ್ನಡವೂ ಗಣಕದಲ್ಲಿದೆಯೇ? ಇಂತವೇ ಹತ್ತು-ಹಲವು ಪ್ರಶ್ನೆಗಳು ನಮಗೆ ಮೂಡಬಹುದು. ಅವುಗಳಿಗೆ ಉತ್ತರ ನೀಡುವ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಗಣಕವು ತನಗೆ ಕೊಟ್ಟ ಮಾಹಿತಿಗಳನ್ನು ಒಂದು ಗೊತ್ತಾದ ಸಂಕೇತಕ್ಕೆ ಪರಿವರ್ತಿಸಿ ತನ್ನ ಸ್ಮೃತಿಕೋಷದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಬಳಕೆದಾರರು ಯಾವಾಗಲೇ ಆ ಮಾಹಿತಿಯನ್ನು ಪಡೆಯ ಬಯಸಿದರೆ ಸೂಕ್ತ ಸೂಚನೆಗಳನ್ನು ಗಣಕಕ್ಕೆ ಕೊಡುವ ಮೂಲಕ ಆ ಮಾಹಿತಿಯನ್ನು ತತ್‌ಕ್ಷಣದಲ್ಲಿಯೇ ಪಡೆಯಬಹುದು.

ಗಣಕಕ್ಕೆ ಮಾಹಿತಿಗಳನ್ನು ಹಾಗು ಸೂಚನೆಯನ್ನು ಗಣಕದ ಕೀಲೀಮಣೆಯನ್ನು ಅಥವಾ ‘ಮೌಸ್’ ಅನ್ನು ಬಳಸಿ ನೀಡಲಾಗುತ್ತದೆ. ಈ ಸೂಚನೆಗಳ ಕುರಿತಾದ ಮಾಹಿತಿಯನ್ನು ಗಣಕಕ್ಕೆ ಮೊದಲೇ ‘ತಂತ್ರಾಂಶಗಳ’ ಮೂಲಕ ನೀಡಲಾಗಿರುತ್ತದೆ. (‘ತಂತ್ರಾಂಶಗಳೆಂದರೆ ‘ಗಣಕದ ಭಾಷೆ’ ಯಲ್ಲಿ ಗಣಕಕ್ಕೆ ನೀಡಿರುವ ಪೂರ್ವ ನಿರ್ದೇಶನಗಳು.) ಹೌದು, ಗಣಕಕ್ಕೆ ನಮ್ಮ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ! ಗಣಕಕ್ಕೆ ಅರ್ಥವಾಗುವ ಭಾಷೆ ಕೇವಲ ‘ದ್ವಿಮಾನ ಭಾಷೆ’ ಅಂದರೆ‘೧’‘೦’ ಮಾತ್ರ. ಗಣಕವು ಎಲ್ಲಾ ಮಾಹಿತಿಗಳನ್ನು ಇದೇ ಪದ್ಧತಿಯಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ.

ಬೇರೆ ಬೇರೆ ಭಾಷೆಯ ಮಾಹಿತಿಯನ್ನು ಬೇರೆ ಬೇರೆ ‘ಸಂಕೇತ’ (Code) ಗೆ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಳಕೆದಾರರು ಅದನ್ನು ಬಯಸಿದಾಗ ಮತ್ತೆ ಆಯಾ ಭಾಷೆಗೆ ಪರಿವರ್ತಿಸಿ ಗಣಕದ ಪರದೆಯ ಮೇಲೆ ಮೂಡಿಸುತ್ತದೆ.

ಮಾಹಿತಿಗಳನ್ನು ‘ಸಂಕೇತ’ ಭಾಷೆಗೆ ಪರಿವರ್ತಿಸಲು ಅನೇಕ ‘ಶಿಷ್ಟ’ (Standard) ಗಳಿವೆ. ಅವುಗಳಲ್ಲಿ ಮುಖ್ಯವಾದವೆಂದರೆ, ‘ANSI’ (American National Standard Institute) ಹಾಗು ‘ಯೂನಿಕೋಡ್’ (Unicode) (International Standard) ‘ಅಂತರ ರಾಷ್ಟ್ರೀಯ ಶಿಷ್ಟತೆ’

‘ANSI’ ಯನ್ನು ಆಂಗ್ಲ ಭಾಷೆಯನ್ನು ಗಣಕಕ್ಕೆ ಸೇರಿಸಲು ಸಿದ್ಧಪಡಿಸಲಾಯಿತಾದರೂ ಪ್ರಪಂಚದ ಬೇರೆ ಬೇರೆ ಭಾಷೆಗಳನ್ನು ಆರಂಭದಲ್ಲಿ ಇದರ ಮೂಲಕವೇ ಸಂಕೇತ ರೂಪಕ್ಕೆ ಪರಿವರ್ತಿಸಲಾಗುತ್ತಿತ್ತು. ಆದರೆ, ಆಂಗ್ಲ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಸಂಗ್ರಹಿಸುವ ಪದ್ಧತಿಯಲ್ಲಿ ಒಂದು ಶಿಷ್ಟತೆ ಇರಲಿಲ್ಲ. ಇದರಿಂದಾಗಿ ಅಂತರಜಾಲದಲ್ಲಿ ವಿವಿಧ ಭಾಷೆಗಳ ಪಠ್ಯವನ್ನು ತೋರಿಸುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ‘ಯುನಿಕೋಡ್’ ಎಂಬ ಅಂತರರಾಷ್ಟ್ರೀಯ ‘ಶಿಷ್ಟತೆ’ ಯನ್ನು ಜಾರಿಗೊಳಿಸಲಾಯಿತು. ಈ ಶಿಷ್ಟತೆಯನ್ನು ‘ಯುನಿಕೋಡ್ ಕನ್ಸೋರ್ಟಿಯಂ’ ಎನ್ನುವ ಸಂಘಟನೆಯು ನಿರ್ವಹಿಸುತ್ತದೆ. ಕಾಲ-ಕಾಲಕ್ಕೆ ಭಾಷೆಗಳ ವರ್ಣಮಾಲೆಗಳಲ್ಲಾಗುವ ಬದಲಾವಣೆಗಳಿಗನುಗುಣವಾಗಿ ಶಿಷ್ಟತೆಯನ್ನು ಬದಲಾಯಿಸುವ ಅಥವಾ ಈ ಶಿಷ್ಟತೆಗೆ ಸಂಬಂಧಪಟ್ಟ ಇತರ ಕೆಲಸಗಳನ್ನು ಈ ಸಂಘಟನೆಯು ನೋಡಿಕೊಳ್ಳುತ್ತದೆ. ಇದರಿಂದಾಗಿ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗಣಕದಲ್ಲಿ ಸೇರಿಸುವುದು ಸುಲಭಸಾಧ್ಯ. ಆದ್ದರಿಂದ ಯಾವುದೇ ಭಾಷೆಯನ್ನು ಅಂತರಜಾಲದಲ್ಲಿ ತೋರಿಸುವುದು ಸಾಧ್ಯವಾಗುತ್ತದೆ. ಅಲ್ಲದೇ ಈ ಏಕರೂಪ ಶಿಷ್ಟತೆಯು ವಿವಿಧ ಭಾಷೆಗಳಲ್ಲಿ ತಂತ್ರಾಂಶವನ್ನು ಸಿದ್ಧಪಡಿಸಲು ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿನ ಅನೇಕ ಮಾಹಿತಿಗಳು ಅಂತರಜಾಲದಲ್ಲಿ ಲಭ್ಯವಿವೆ; ಅಲ್ಲದೇ ಕನ್ನಡದಲ್ಲಿಯೂ ತಂತ್ರಾಂಶದ ಬೆಳವಣಿಗೆ ಸಾಧ್ಯವಾಗಿದೆ.

ದ್ರಾವಿಡ ಭಾಷೆಗಳಲ್ಲೇ ಕನ್ನಡ ೨ನೆ ಅತ್ಯಂತ ಪ್ರಾಚೀನ ಭಾಷೆ. ‘ಯುನೆಸ್ಕೋ’ ಸಂಘಟನೆಯ ಪ್ರಕಾರ ಕನ್ನಡ ೨೮ ನೆ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆ. ಭಾರತದಲ್ಲಿ ಸಾಹಿತ್ಯದಲ್ಲೇ ಅತ್ಯಂತ ಶ್ರೇಷ್ಟವಾದ ‘ಜ್ಞಾನಪೀಠ’ ಪ್ರಶಸ್ತಿಯು ಅತೀ ಹೆಚ್ಚು ಅಂದರೆ ೮ ಬಾರಿ ಕನ್ನಡ ಭಾಷೆಗೆ ಲಭಿಸಿದೆ. ಹೀಗಿದ್ದರೂ ಮಾಹಿತಿತಂತ್ರಜ್ಞಾನದಲ್ಲಿ ನಮ್ಮ ಕನ್ನಡ ಭಾಷೆ ಕೊಂಚ ಹಿಂದೆಬಿದ್ದಿರುವುದು ವಿಪರ್ಯಾಸ. ಹೀಗಿದ್ದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯು ಅಪಾರ ಸಾಧನೆ ಮಾಡಿರುವುದು ಸಂತಸದ ಸಂಗತಿ. ಕನ್ನಡವನ್ನು ಗಣಕದಲ್ಲಿ ಬೆರಳಚ್ಚು ಮಾಡಲು ಅನೇಕ ತಂತ್ರಾಂಶಗಳು ಲಭ್ಯವಿವೆ. ಕನ್ನಡ ಭಾಷೆಯ ಅಕ್ಷರಗಳನ್ನು ಗಣಕದ ಪರದೆಯ ಮೇಲೆ ಮೂಡಿಸಲು ವಿವಿಧ ಬಗೆಯ ‘ಫಾಂಟ್’ (Font) ಗಳು ಲಭ್ಯವಿವೆ. ಹೀಗಾಗಿ ಕನ್ನಡ ಭಾಷೆಯನ್ನು ಗಣಕದಲ್ಲಿ ಬೆರಳಚ್ಚು ಮಾಡುವುದು, ಮುದ್ರಿಸುವುದು ಅಥವಾ ಅಂತರಜಾಲಕ್ಕೆ ಸೇರಿಸುವುದು ತುಂಬಾ ಸುಲಭವಾಗಿದೆ. ಇದರಿಂದಾಗಿ ಕನ್ನಡದಲ್ಲಿ ಮುದ್ರಕರು ಹಾಗು ಮುದ್ರಣ ಮಾಧ್ಯಮಗಳು ಹೆಚ್ಚು ಹೆಚ್ಚು ಬೆಳೆಯಲು ಸಾಧ್ಯವಾಗಿದೆ. ಸುಲಭವಾಗಿ ಅಂತರಜಾಲದಲ್ಲಿ ಕನ್ನಡವನ್ನು ಸೇರಿಸಲು ಸಾಧ್ಯವಾಗಿರುವುದರಿಂದ ಅನೇಕ ಕನ್ನಡ ಬ್ಲಾಗುಗಳು ಹಾಗು ವೆಬ್‌ಸೈಟುಗಳು ಹುಟ್ಟಿಕೊಂಡು ಹೆಚ್ಚು ಹೆಚ್ಚು ಮಾಹಿತಿಗಳು ಹಾಗು ಮನೋರಂಜನೆಯನ್ನು ಕನ್ನಡಿಗರಿಗೆ ನೀಡುತ್ತಿವೆ. ಅನೇಕ ಅಂತರಜಾಲ ನಿಘಂಟುಗಳು ಹಾಗೂ ಅಂತರಜಾಲ ‘ಜ್ಞಾನಕೋಷಗಳು’ ಕನ್ನಡ ಭಾಷೆಯ ಗರಿಮೆಗೆ ಮುಖುಟವಿಟ್ಟಂತಾಗಿದೆ. ಬೇರೆ-ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಅನುವಾದಿಸುವ ಸೌಲಭ್ಯವೂ ಅಂತರಜಾಲದಲ್ಲಿ ರೂಪುಗೊಳ್ಳುತ್ತಿದೆ.
ಇವುಗಳಲ್ಲಿ ಕೆಲವು ಉಪಯುಕ್ತ ಕನ್ನಡ ಬ್ಲಾಗು/ವೆಬ್ಸೈಟುಗಳನ್ನು ನಿಮ್ಮ ಅನುಕೂಲಕ್ಕಾಗಿ ಇಲ್ಲಿ ಕೊಡಲಾಗಿದೆ.

ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ’ಅಂತರ ಜಾಲ ಜ್ಞಾನಕೋಷ’ "ಕನಜ"
http://kanaja.in/
’ಕಣಜ’ ದಲ್ಲಿ ಹಲವು ಕನ್ನಡ ನಿಘಂಟು/ಪದಕೋಷಗಳು ಬಳಕೆಗೆ ಲಭ್ಯ. ’ಯುನಿಕೋಡ್’ ಕನ್ನಡ ಪಠ್ಯವನ್ನು ಓದಿ ಹೇಳುವ (ಧ್ವನಿ ರೂಪಕ್ಕೆ ಬದಲಾಯಿಸುವ) ಒಂದು ಮುಕ್ತ ತಂತ್ರಾಂಶವೂ ಲಭ್ಯವಿದೆ.

ಕನ್ನಡ ವಿಕಿಪೀಡಿಯ
http://kn.wikipedia.org/

ಗೂಗಲ್ ಅನುವಾದ

http://translate.google.com/

ಕೆಲವು ಇತರೇ ಕನ್ನಡ ಬ್ಲಾಗು/ಸೈಟುಗಳು:
http://kannada.oneindia.in/
http://www.kendasampige.com/
http://mitramaadhyama.co.in/
http://pavanaja.com/
http://kannada.webdunia.com/
http://vishvakannada.com/

ಗಮನಿಸಿ: ಈ ಪಟ್ಟಿಯಲ್ಲಿ ಕೆಲವೇ ಕೆಲವು ಜಾಲತಾಣಗಳ ವಿಳಾಸ ಲಭ್ಯ. ಇನ್ನೂ ಹೆಚ್ಚಿನ ವಿಳಾಸಕ್ಕಾಗಿ, ಕಣಜದಲ್ಲಿನ ’ಕನ್ನಡ ಬ್ಲಾಗ್ ಸೂಚಿ’ ಗೆ ಬೇಟಿ ನೀದಿ.

ಒಟ್ಟಿನಲ್ಲಿ ಹೇಳುವುದಾದರೆ ಮಾಹಿತಿತಂತ್ರಜ್ಞಾನದಲ್ಲಿ ಕನ್ನಡ ಭಾಷೆಯೂ ಸೇರಿಕೊಂಡಿರುವುದರಿಂದ, ಕನ್ನಡ ಭಾಷೆಗೆ ಹಾಗೂ ಭಾಷೆಯ ಬೆಳವಣಿಗೆಗೆ ತುಂಬಾ ಅನುಕೂಲವಾಗಿರುವುದಂತು ಸತ್ಯ. ಬರೀ ಗಣಕದಲ್ಲಿ ಮಾತ್ರವಲ್ಲದೇ, ಮೊಬೈಲ್ ಫೋನುಗಳು, ’ಟ್ಯಾಬ್ಲೆಟ್’ ಪಿ.ಸಿ.ಗಳಲ್ಲಿಯೂ ನಮ್ಮ ಕನ್ನಡ ಭಾಷೆ ಲಭ್ಯ ಎನ್ನುವುದು ಕನ್ನಡಿಗರಾದ ನಮಗೆ ಅತ್ಯಂತ ಸಂತಸ ಹಾಗು ಹೆಮ್ಮೆಯ ವಿಷಯ.

"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ"ಜೈ ಕನ್ನಡಾಂಬೆ!

Thursday, September 29, 2011

ಕಲ್ಪನೆ, ಭಾವನೆ, ಯೋಚನೆ

Dear all, in this post I am going write something about immagination and perception. Although this post does not cite any scientific reports, I hope this not unscientific. This artical is written on the basis of some questions raised by the people and some my own experiences. Your comments/responces are highly appreciated with regards to this article. Your comments/responces would definitly will expand my little knowledge! so please do respond me :-)

This article is fully in Kannada.

ಬಹಳ ದಿನಗಳ ನಂತರ ನನಗೆ ತೋಚಿದ ಒಂದು ವಿಚಾರದಬಗ್ಗೆ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದಕ್ಕೆ ನಿಖರವಾದ ವೈಜ್ಞಾನಿಕ ಆದಾರಗಳು ನನ್ನಲ್ಲಿ ಇಲ್ಲದೇ ಹೋದರೂ, ನನಗೆ ಅನೇಕರು ಕೇಳಿದ ಪ್ರಶ್ನೆಗಳು ಹಾಗು ನನ್ನ ಅನುಭವ/ಯೋಚನೆಗಳ ಆದಾರದ ಮೇಲೆ ಇದನ್ನು ಬರೆಯುತ್ತಿದ್ದೇನೆ. ನಿಮ್ಮ ವಿಮರ್ಶೆಗಳಿಗೆ ಮುಕ್ತ ಸ್ವಾಗತ. ನಿಮ್ಮ ಪ್ರತಿಕ್ರಿಯೆಗಳು ನನ್ನ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಲಿದೆ ಎಂಬುದು ನನ್ನ ನಂಬಿಕೆ. ಇರಲಿ, ಇನ್ನು ನೇರವಾಗಿ ವಿಷಯಕ್ಕೆ ಬರೋಣ.

ಪ್ರತಿಯೊಂದು ಜೀವಿಗೂ ಕಲ್ಪಿಸಿಕೊಳ್ಳುವ, ಭಾವಿಸುವ ಹಾಗು ಯೋಚಿಸುವ ಶಕ್ತಿ ಸಹಜವಾಗಿಯೇ ಬಂದಿದೆ. ಈ ಶಕ್ತಿ ಬೆಳೆಯಲು ಆಯಾಯ ಜೀವಿಯ ಸುತ್ತಮುತ್ತಲಿನ ಪರಿಸರ, ನಡೆಯುವ ವಿದ್ಯಮಾನಗಳು, ಹಾಗು ಕೆಲವು ಜೈವಿಕ ಪ್ರಕ್ರಿಯೆಗಳು ಕಾರಣವಾಗುತ್ತವೆ. ತನ್ನ ಸುತ್ತಲಿನ ಪರಿಸರದ ಬಗೆಗೆ ಆ ಜೀವಿಯ ಇಂದ್ರೀಯಗಳು ಮಾಹಿತಿ ನೀಡುತ್ತವೆ. ಇನ್ನು ಜೈವಿಕ ಪ್ರಕ್ರಿಯೆಗಳಿಗೆ ಸಂಬಂಧಪಟ್ಟ ಅಂಶಗಳನ್ನು ವಂಶವಾಹಿಗಳು ಅಥವಾ ಜೀನ್‌ಗಳು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತವೆ.

ಈ ಮೇಲೆ ಹೇಳಿದ ವಿಚಾರಗಳು ಜಗತ್ತಿನ ಹೆಚ್ಚೂ ಕಡಿಮೆ ಎಲ್ಲಾ ಜೀವಿಗಳಿಗೂ ಅನ್ವಯವಾಗುತ್ತದೆ. ಆದರೆ ಜೀವ ವೈವಿದ್ಯದ ಒಂದು ಭಾಗವಾಗಿರುವ ಸಸ್ಯಗಳ ಬಗೆಗೆ ಈ ಕುರಿತು ಹೇಳುವುದು ಕಷ್ಟ, ಅಥವಾ ನನಗೆ ಆ ಬಗ್ಗೆ ಮಾಹಿತಿ ಕೊಂಚ ಕಡಿಮೆ. ಕೆಲವರು ಸಸ್ಯಗಳಿಗೂ ಭಾವನೆ-ಯೋಚನೆ ಇದೆ ಎಂದು ಹೇಳಿದರೂ ಮತ್ತೆ ಕೆಲವರು ಅವಕ್ಕೆ ಭಾವನೆ-ಯೋಚನೆಗಳಿದ್ದರೂ ಪ್ರತಿಕ್ರಿಯೆಯನ್ನು ಅವು ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಅದೆಲ್ಲಾ ಏನೇ ಇರಲಿ ನಾನು ಇಲ್ಲಿ ಹೇಳಹೊರಟಿರುವುದು ಮನುಷ್ಯನ ಭಾವನೆಗಳು, ಕಲ್ಪನೆಗಳು, ಹಾಗು ಯೋಚನೆಗಳಬಗ್ಗೆ ಮಾತ್ರ.

ನಾನು ಮೇಲೆ ಹೇಳಿದಂತೆ ನಮ್ಮ ಇಂದ್ರೀಯಗಳು ನಮ್ಮ ಸುತ್ತಲಿನ ಪರಿಸರದ ಬಗೆಗೆ ಮಾಹಿತಿಯನ್ನು ನಮಗೆ ನೀಡುತ್ತವೆ. ಇದು ನಮ್ಮ ಬುದ್ಧಿಶಕ್ತಿಯನ್ನು ಬೆಳೆಸಿ ನಮ್ಮ ಕಲ್ಪನಾಶಕ್ತಿಯನ್ನು ಬೆಳೆಸುತ್ತದೆ. ನಮಗೆ ನಾವು ನೋಡದ ಅಥವಾ ಕೇಳದ ಒಂದು ವಸ್ತುವಿನ ಬಗ್ಗೆ ಕಲ್ಪಿಸಿಕೊಳ್ಳುವುದು ಎಂದೆಂದಿಗೂ ಸಾಧ್ಯವೇ ಇಲ್ಲ. ಇದನ್ನು ನೀವು ಒಪ್ಪದಿದ್ದರೆ, ನೀವೇ ಬೇಕಾದರೆ ಪರೀಕ್ಷಿಸಿ ನೋಡಬಹುದು. ನಾವು ದೇವರಬಗ್ಗೆ ಕೇಳಿದ್ದೇವೆ. ಅವನನ್ನು ಮನುಷ್ಯ ರೂಪದಲ್ಲಿ ಪೂಜಿಸುತ್ತೇವೆ. ಅದು ದೇವರ ಬಗೆಗೆ ನಮ್ಮ ಒಂದು ಕಲ್ಪನೆ. ಆದರೆ ದೇವರ ಮೂರ್ಥಿ ಪೂಜೆಯನ್ನು ಒಪ್ಪದ ಜನ ದೇವರ ಈ ರೂಪವನ್ನು ಒಪ್ಪುವುದಿಲ್ಲ. ಹಾಗಾದರೆ ದೇವರ ರೂಪ ಹೇಗಿರಬಹುದು? ಕೆಲವರು ದೇವರು ಒಂದು ಶಕ್ತಿ ಅವನು ನಿರಾಕಾರ ಎಂದರೆ, ಕೆಲವರು ದೇವರನ್ನು ಬೆಳಕಿನಂತೇ, ನೀರಿನಂತೇ, ಗಾಳಿಯಂತೆ, ಹೀಗೆ ಅವರವರಿಗೆ ತಿಳಿದಂತೆ ದೇವರನ್ನು ಕಲ್ಪಿಸಿಕೊಳ್ಳುತ್ತಾರೆ, ಆದರೆ ದೇವರ ನಿಜರೂಪವನ್ನು ಬಹುಶಃ ಯಾರಿಂದಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಯಾರೂ ದೇವರನ್ನು ನೋಡಿಲ್ಲ! ನಾವು ಕಲ್ಪಿಸಿಕೊಳ್ಳುವ ದೇವರ ರೂಪವು ನಾವು ಕಣ್ಣಿನಿಂದ ನೋಡಿರುವ ಯಾವುದಾದರೂ ಒಂದಕ್ಕೆ ತಳುಕುಹಾಕಿಕೊಂಡಿರುತ್ತದೆ ಅಲ್ಲವೇ? ನೀವು ಬೇಕಾದರೆ ನೀವು ನೋಡಿರದ ಒಂದು ವಸ್ತುವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ ನೋಡಿ, ನೀವು ನೋಡಿರುವ ಯಾವುದಾದರೂ ಒಂದು ವಸ್ತುವಿಗೆ ಅದನ್ನು ಹೋಲಿಸಿ ಕಲ್ಪಿಸಿಕೊಳ್ಳಲು ಮಾತ್ರ ಸಾಧ್ಯ! ಇನ್ನು ಪಂಚೇಂದ್ರೀಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಹಾಗು ಚರ್ಮಗಳಲ್ಲಿ ಯಾವುದಾದರೂ ಒಂದು ಇಂದ್ರೀಯ ಮನುಷ್ಯನ ಹುಟ್ಟಿನಿಂದಲೇ ಕೆಲಸ ಮಾಡದಿದ್ದರೆ, ಆ ಮನುಷ್ಯನಿಗೆ ಆ ಇಂದ್ರೀಯದಿಂದ ಒಳಬರುವ ಮಾಹಿತಿಯ ಅರಿವೇ ಇರುವುದಿಲ್ಲ! ಉದಾಹರಣೆಗೆ ಹುಟ್ಟಿನಿಂದಲೇ ಬೆಳಕನ್ನು ಕಾಣದ ಒಬ್ಬ ಅಂಧನಿಗೆ ಬೆಳಕಿನ್ ಅರಿವೇ ಇರುವುದಿಲ್ಲ. ಅಂತೆಯೇ ಅದನ್ನು ಕಲ್ಪಿಸಿಕೊಳ್ಳಲೂ ಅವನಿಂದ ಸಾಧ್ಯವೇ ಇಲ್ಲ! ಅದೇ ರೀತಿ ಹುಟ್ಟಿನಿಂದಲೇ ಶಬ್ದವನ್ನೇ ಕೇಳದ ಒಬ್ಬ ಶ್ರವಣ ದೋಶವುಳ್ಳ ವ್ಯಕ್ತಿಗೆ ಶಬ್ದವೆಂದರೇನೆಂದೇ ತಿಳಿದಿರುವುದಿಲ್ಲವಾದ್ದರಿಂದ ಅವನಿಗೆ ಶಬ್ದದ ಕಲ್ಪನೆ ಸಾಧ್ಯವೇ ಇಲ್ಲ! ಇನ್ನೊಂದು ವಿಷಯವೆಂದರೆ ಹುಟ್ಟಿನಿಂದ ಅಂಧರಾದ ವ್ಯಕ್ತಿಗಳು ಕನಸಿನಲ್ಲೂ ಯಾವುದೇ ದೃಷ್ಯವನ್ನು ಕಾಣಲಾರರು! ಹಾಗೆಯೇ ಹುಟ್ಟಿನಿಂದಲೇ ಶ್ರವಣ ದೋಶವುಳ್ಳವರು ತಮ್ಮ ಕನಸಿನಲ್ಲಿ ಯಾವುದೇ ಶಬ್ದವನ್ನು ಕೇಳಲಾರರು! ಇದನ್ನೆಲ್ಲಾ ಗಮನಿಸಿದರೆ, ನಮ್ಮ ಕಲ್ಪನಾಶಕ್ತಿಯು ಇಂದ್ರೀಯಗಳಿಂದ ಒಳಬರುವ ಮಾಹಿತಿಗಳ ಮೇಲೆಯೇ ಅವಲಂಬಿತವಾಗಿದೆ ಎಂಬುದು ಸ್ಫಷ್ಟ. ಆದರೆ ಕೆಲವು ಬಯಕೆಗಳನ್ನು ಹೊಂದಿರುವ ಕಲ್ಪನೆಗಳು,ಭಾವನೆಗಳು, ಯೋಚನೆಗಳು ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಉಂಟಾಗುತ್ತವೆ. ಉದಾಹರಣೆಗೆ ಲೈಂಗಿಕತೆಯ ಕುರಿತ ಯೋಚನೆಗಳು ಅಥವಾ ಕಲ್ಪನೆಗಳು ಇಂದ್ರೀಯಗಳಿಂದ ಬರುವ ಮಾಹಿತಿಯನ್ನು ಅವಲಂಬಿಸಿರುವುದಿಲ್ಲ. ಉದಾಹರ‍ಣೆಗೆ ಒಬ್ಬ ಬುದ್ಧಿಮಾಂದ್ಯ ಮನುಷ್ಯನಿಗೂ ಯಾವುದೇ ಮಾಹಿತಿ ಇಲ್ಲದೇ ಇದ್ದಕ್ಕಿದ್ದಂತೆ ಲೈಂಗಿಕ ಬಯಕೆಗಳು ಹುಟ್ಟಿಕೊಳ್ಳಬಹುದು. ಹೀಗೆ ಕೆಲವು ನೈಸರ್ಗಿಕ ವಿಚಾರಗಳನ್ನು ಬಿಟ್ಟರೆ, ಉಳಿದ ಎಲ್ಲಾ ಕಲ್ಪನೆಗಳು ನಾವು ನೋಡಿದ ಅಥವಾ ಕೇಳಿದ ವಸ್ತು ಅಥವಾ ವಿಷಯಗಳ ಮೇಲೆ ಅವಲಂಬಿತವಾಗಿರುತ್ತವೆ.

ಈ ಮೇಲ್ಕಂಡ ಮಾಹಿತಿಗಳನ್ನು ನನ್ನ ಸ್ವಂತ ಅನುಭವ ಹಾಗು ವಯ್ಯಕ್ತಿಕ ಅಭಿಪ್ರಾಯಗಳ ಮೇಲಷ್ಟೇ ನೀಡಿದ್ದೇನೆ. ನಾನು ಒಬ್ಬ ಅಂಧನಾಗಿದ್ದುಕೊಂಡು ಜೊತೆಗೆ ಬೇರೆ ಬೇರೆ ರೀತಿಯ ಅಂಗವೈಕಲ್ಯ ಹೊಂದಿದವರ ಜೊತೆಗಿನ ನನ್ನ ಸಹವಾಸ, ಮತ್ತೆ ಕೆಲವರು ನನಗೆ ಕೇಳಿದ ವಿವಿಧ ಪ್ರಶ್ನೆಗಳು ಇದನ್ನು ಬರೆಯಲು ಸ್ಫೂರ್ತಿ. ಇದು ಯಾವುದೇ ಮಾನಸಿಕ ಸಂಶೋಧನೆಗಳ ಮೇಲೆ ಆಧಾರಿತವಾಗಿರದೇ ಕೇವಲ ವಯ್ಯಕ್ತಿಕ ಅನುಭವಗಳ ಮೇಲೆ ಆಧಾರಿತವಾಗಿದೆ. ಈ ಲೇಖನ ಸಂಪೂರ್ಣವಾಗಿ ವೈಜ್ಞಾನಿಕವಾದ ಪ್ರಶ್ನೋತ್ತರಗಳಿಂದ ಸಂಯೋಜನೆ ಮಾಡಿಲ್ಲವಾದ್ದರಿಂದ ಇದನ್ನು ಒಪ್ಪುವುದು ಅಥವಾ ಬಿಡುವುದು ನಿಮಗೆ ಬಿಟ್ಟ ವಿಚಾರ, ಆದರೆ ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತೆಂದರೆ, ‘ಅನುಭವದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ; ವಿಜ್ಞಾನದಿಂದ ಜ್ಞಾನ ಅಥವಾ ಅನುಭವವಲ್ಲ!’

ಈ ಮೇಲೆ ಹೇಳಿದ ವಿಚಾರಗಳ ಬಗೆಗೆ ನಿಮ್ಮ ವಿಮರ್ಶೆಗಳಿಗೆ ಸ್ವಾಗತ!