Saturday, August 6, 2011

ಸಿರಿ ನುಡಿ "ಈ" ಕನ್ನಡ ನುಡಿ

"ಸಿರಿನುಡಿ" ಇದೊಂದು ಕನ್ನಡ ಅಂತರಜಾಲ ತಾಣ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದ ಪಟ್ಟ ಅನೇಕ ಮಾಹಿತಿಗಳು ಸಿಗುತ್ತವೆ. ಇಲ್ಲಿನ ಲೇಖನ ಗಳನ್ನು 'DJVU' ಫಾರ್‌ಮ್ಯಾಟಿನಲ್ಲಿ ನೀಡಿದ್ದಾರೆ. ಸಹೃದಯೀ ಕನ್ನಡ ಸಾಹಿತ್ಯಾಸಕ್ತರು ತಮ್ಮ ಪುಸ್ತಕ ಓದುವಂತೆಯೇ ಇಲ್ಲಿನ ಲೇಖನಗಳನ್ನು ಓದಬಹುದು. ಬಹಳ ಮುಖ್ಯ ಸಂಗತಿ ಎಂದರೆ ಇಲ್ಲಿನ ಲೇಖನಗಳು ಯುನಿಕೋಡ್‌ನಲ್ಲೂ ಲಭ್ಯವಿದೆ. ಇದನ್ನು ಕನ್ನಡ "ಟೆಕ್ಸ್‌ಟ್ ಟು ಸ್ಪೀಚ್" (Text To Speech) ಅನ್ನು ಬಳಸಿ ಕಣ್ಣು ಕಾಣದವರೂ, ಅನಕ್ಷರಸ್ತರೂ ಸಹಾ ಓದಬಹುದಾಗಿದೆ. ಇಲ್ಲಿ ಅನೇಕ ವಿಚಾರಗಳ ಕುರಿತು ಲೇಖನಗಳಿವೆ. ಮುಖ್ಯವಾಗಿ ಹೇಳುವುದಾದರೆ, ಪ್ರಜಾವಾಣಿಯ ಹಳತು-ಹೊನ್ನು ಅಂಕಣದಲ್ಲಿ ಪರಿಚಯಿಸಲ್ಪಟ್ಟ ಪುಸ್ತಕಗಳು, ಅವಧೂತ ಶ್ರೇಷ್ಠರಾದ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ ಗುರು ಮಹಾರಾಜರ ಸಂದೇಶೋಪದೇಶ ಸಾಹಸ್ರಿ ಗ್ರಂಥ ಧ್ಯಾನ ಮಿಂಚು, ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ, All India Magazine ಮಾಸ ಪತ್ರಿಕೆಯ ಕನ್ನಡ ಅನುವಾದ ಅಖಿಲ ಭಾರತದ ಪತ್ರಿಕೆ, ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ, ಗೋಪಾಲಕೃಷ್ಣ ಅಡಿಗರು ಆರಂಭಿಸಿ ಬೆಳೆಸಿದ ಸಾಕ್ಷಿ ಪತ್ರಿಕೆಯ ಎಲ್ಲಾ ಸಂಚಿಕೆಗಳು, ಇತ್ಯಾದಿ. ಹೀಗೆ ಹತ್ತು ಹಲವು ಲೇಖನ/ಮಾಹಿತಿ ತುಂಬಿದ ಜಾಲತಾಣ ಸಿರಿನುಡಿ. ಅಂದರೆ "ಈ ಕನ್ನಡ" ವನ್ನು ಬೆಳಸುತತ್ತಿರುವ ಸಿರಿನುಡಿ.

ಇಷ್ಟೆಲ್ಲಾ ಹೇಳಿದ ಮೇಲೆ "ಇಲ್ಲಿ ನಂಗೇನಿಷ್ಟ" ಅಂತ ನಾನೇ ಹೇಳಬೇಕಲ್ಲವೇ? ಹೇಳುತ್ತೇನೆ. ಆದರೆ ಅದರ ಜೊತೆ ನೀವೂ ಸಿರಿನುಡಿ ಜಾಲತಾಣವನ್ನು ಸಂದರ್ಶಿಸಿ ಅಲ್ಲಿ ನಿಮಗೇನಿಷ್ಟ ಅಂತ ದಯವಿಟ್ಟು ನಂಗೂ ಹೇಳಿ!

ಇಲ್ಲಿ ನನಗೆ ಅತ್ಯಂತ ಇಷ್ಟವಾದ ಲೆಖನ/ಪುಸ್ತಕ: ಡಾ.ಹೆಚ್.ರಾಮಚಂದ್ರಸ್ವಾಮಿರವರ ಮಹಾಭಾರತಕಥಾಸಂಗ್ರಹ.
ನಾನು ಇಲ್ಲಿ ನಿರಂತರವಾಗಿ ಓದ ಬಯಸುವ ಇನ್ನೊಂದು ವಿಭಾಗವೆಂದರೆ ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ.
ಮಾಹಿತಿಯನ್ನು ನೀಡುವ ಮೂಲಕ ಮನಸೂರೆ ಮಾಡಿರುವ ಇನ್ನೊಂದು ಪ್ರಮುಖವಿಭಾಗವೆಂದರೆ 1918 ರಲ್ಲಿ ಪ್ರಕಟವಾದ ವಿಜ್ಞಾನ ಮಾಸಪತ್ರಿಕೆ, ಸಂಪಾದಕರು: ಬೆಳ್ಳಾವೆ ವೆಂಕಟನಾರಾಣಪ್ಪನವರು ಮತ್ತು ಎನ್. ವೆಂಕಟೇಶಯ್ಯಂಗಾರ್ಯರು.

ಇದೆಲ್ಲಕ್ಕೂ ಮಿಗಿಲಾಗಿ ಇಲ್ಲಿನ ಲೇಖನಗಳಲ್ಲಿ ಪದಗಳನ್ನು ಹುಡುಕಲು ಓಸೀಆರ್ ತಂತ್ರಜ್ಞಾನದ ಸಹಾಯವೂ ದೊರೆಯುತ್ತದೆ. ಓಸೀಆರ್ ತಂತ್ರಜ್ಞಾನದ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ವಿಸ್ತೃತ ಬರಹವನ್ನೇ ಬರೆಯುತ್ತೇನೆ. ಅಷ್ಟರೊಳಗೆ ನೀವೇ ಇದರ ಬಗ್ಗೆ ಹುಡುಕುವ ಪ್ರಯತ್ನ ಮಾಡಿ. ಈ ವಿಷಯದಲ್ಲಿ ನಿಮ್ಮ ಕುತೂಹಲವನ್ನು ಸ್ವಲ್ಪ ಉಳಿಸುವ ಆಸೆ ನನ್ನದು.

ಇದೆಲ್ಲದರೊಟ್ಟಿಗೆ ನಾನು ಬೇಳೂರು ಸುದರ್ಶನ ಅವರಿಗೆ ಹೃತ್ಪೂರ್ವಕ ವಂದನೆಗಳನ್ನರ್ಪಿಸಲು ಬಯಸುತ್ತೇನೆ. ಏಕೆಂದರೆ ಇವರು ನನಗೆ ಕನ್ನಡದ ಓಸೀಆರ್ ತಂತ್ರಜ್ಞಾನಕ್ಕೆ ಕೆಲಸ ಮಾಡುತ್ತಿರುವ ಮೈಸೂರಿನ ಯೋಗಾನಂದ ಅವರನ್ನು ಪರಿಚಯಿಸಿದರು. ಯೋಗಾನಂದರವರು ಇನ್ನೂ ಅನೇಕ ಪುಸ್ತಕಗಳನ್ನು ನನ್ನ ಹಾಗು ಎಲ್ಲರ ವಿಶೇಷವಾಗಿ ಎಲ್ಲಾ ಅಂಧರ ಅನುಕೂಲಕ್ಕಾಗಿ Electronic book ರೂಪಕ್ಕೆ ಪರಿವರ್ತಿಸಿಕೊಡುವ ಭರವಸೆನೀಡಿದ್ದಾರೆ. ಕಣಜ ಜಾಲತಾಣದ ಸಮನ್ವಯಕಾರರಾಗಿರುವ ಬೇಳೂರು ಸುದರ್ಶನ ಅವರ ಬಗ್ಗೆಹಾಗು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಆಗಿರುವ ಕನ್ನಡ ಓಸೀಆರ್ ತಂತ್ರಜ್ಞಾನವನ್ನು ತಯಾರಿಸುತ್ತಿರುವ ಯೋಗಾನಂದ ಅವರುಗಳ ಬಗ್ಗೆ ಮುಂದೊಂದು ದಿನ ಖಂಡಿತಾ ಬರೆಯುತ್ತೇನೆ. ಈಗ ಸಮಯ ಬಹಳವಾಯಿತು. ಇತ್ತೀಚೆಗೆ ಮೊದಲಿನಂತೆ ಬೇಕಾದಷ್ಟು ಸಮಯ ನನಗೆ ಸಿಗುತ್ತಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸಗಳಲ್ಲಿ ತೊಡಗಿದ್ದೇನೆ. ಅವನ್ನೂ ಶೀಘ್ರದಲ್ಲಿ ಬರೆಯುತ್ತೇನೆ.