Monday, June 20, 2011

ಅಂಧರ ಬಾಳಿಗೆ ಬೆಳಕಾಗಬಲ್ಲ ‘ಸ್ಟೆಮ್ ಸೆಲ್‘ ತೆರಪಿ

Dear all, Here I am posting a reproduced article bassed on an article in a popular site. This article explains about the use of stem cells for treating various retinal diseases.

----------------------------------------------
ಸ್ಟೆಮ್ ಸೆಲ್ (Stem Cell) ಅನ್ನು ಬಳಸಿ ವಂಶವಾಹಿಗಳಿಂದ ಅನುವಂಶೀಯವಾಗಿ ಬರುವ ಒಂದು ಬಗೆಯ ಅಂಧತ್ವವನ್ನು ಸರಿಪಡಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಈ ಸಂಶೋಧನೆಯ್ಯು ಅಕ್ಷಿಪಟಲ (Retina) ಸಂಬಂದಿ ಕಾಯಿಲೆಗಳಿಗೆ ಮುಂದಿನ ದಿನಗಳಲ್ಲಿ ಒಂದು ಶಾಶ್ವತ ಚಿಕಿತ್ಸೆಯನ್ನು ನೀಡುವ ಭರವಸೆಯನ್ನು ಮೂಡಿಸಿದೆ. ಮ್ಯಾಕ್ಯುಲಾರ್ ಡಿಜನರೇಶನ್ (Macular degeneration), ರೆಟಿನೈಟಿಸ್ ಪಿಗ್‌ಮೆಂಟೋಸ (Retinitis pigmentosa) ಇಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಬಲಿಯಾಗಿ ಕುರುಡರಾಗುತ್ತಿದ್ದಾರೆ. ಇಂಥವರ ಜೀವನದಲ್ಲಿ ಮತ್ತೆ ಬೆಳಕು ಮೂಡುವ ಆಶಯವನ್ನು ಈ ಸಂಶೋಧನೆ ಮೂಡಿಸಿದೆ.

ಸ್ಟೆಮ್‌ಸೆಲ್ ಸಂಶೋಧನೆಗಳ ಕುರಿತಾಗಿರುವ ಒಂದು ಪ್ರತಿಷ್ಠಿತ ಆನ್‌ಲೈನ್ ಜರ್‌ನಲ್‌ನಲ್ಲಿ ಈ ಕುರಿತ ಸಂಶೋಧನೆಯ ವಿವರಗಳು ಜೂನ್ ೧೫ ರಂದು ಪ್ರಕಟಗೊಂಡಿವೆ. ಈ ಸಂಶೋಧನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ (induced pluripotent stem) (iPS) ಸೆಲ್‌ಗಳನ್ನು ಬಳಸಿ ಒಂದು ವಿರಳ ಅನುವಂಶೀಯ ಖಾಯಿಲೆಯಾದ ಜೆಯ್‌ರೇಟ್ ಆಟ್ರಫಿ (gyrate atrophy) ಅನ್ನು ಗುಣಪಡಿಸಲಾಗಿದೆ. ಈ ಕಾಯಿಲೆಯು ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ (retinal pigment epithelium) (RPE) ಸೆಲ್‌ಗಳನ್ನು ನಾಶ ಪಡಿಸಿ ಅಂಧತ್ವವನ್ನುಂಟು ಮಾಡುತ್ತದೆ. ಇವುಗಳು ರೆಟಿನಾದಲ್ಲಿನ ‘ಫೋಟೋ ರಿಸೆಪ್ಟಾರ್‘ ಸೆಲ್‌ಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಈ ಫೋಟೋ ರಿಸೆಪ್ಟಾರ್ ಸೆಲ್‌ಗಳು ರೆಟಿನಾದ ಮೇಲೆ ಬಿದ್ದ ಬೆಳಕನ್ನು ಸಂಕೇತ ರೂಪಕ್ಕೆ ಪರಿವರ್ತಿಸಿ ಮೆದುಳಿಗೆ ಕಳಿಸುವಲ್ಲಿ ನೆರವಾಗುತ್ತವೆ. ಈ ಸಂಕೇತಗಳನ್ನು ಮೆದುಳು ಗ್ರಹಿಸಿ ಅವುಗಳನ್ನು ಅರ್ಥೈಸಿಕೊಳ್ಳುತ್ತದೆ. ಆದರೆ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳ ತೊಂದರೆಯಿಂದಾಗಿ ಫೋಟೋ ರಿಸೆಪ್ಟಾರ್ ಸೆಲ್‌ಗಳು ಸರಿಯಾಗಿ ಕೆಲಸ ಮಾಡದೇ ಕುರುಡತ್ವ ಉಂಟಾಗುತ್ತದೆ. ಹಾಳಾದ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳನ್ನು ಪುನರ್‌ನಿರ್ಮಾಣ ಮಾಡುವುದರಿಂದ ಈ ಕಾಯಿಲೆಯಿಂದಾಗಿ ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿಸಬಹುದು.

"ನಾವು ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ ಸೆಲ್‌ಗಳನ್ನು ತಯಾರಿಸಿ, ಈ ಕಾಯಿಲೆಗೆ ಕಾರಣವಾದ ಒಂದು ಬಗೆಯ ವಂಶವಾಹಿ ತೊಂದರೆಯನ್ನು ಸರಿಪಡಿಸಿ, ಈ ಇಂಡ್ಯೂಸ್‌ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳು ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳಾಗಿ ಬೆಳೆಯುವಂತೆ ಮಾಡಿದಾಗ ಈ ಸೆಲ್‌ಗಳು ಸ್ವಾಬಾವಿಕವಾಗಿ ಕಾರ್ಯನಿರ್ವಹಿಸಿದವು. ಈ ಫಲಿತಾಂಶವು ತುಂಬಾ ಉತ್ತೇಜನಕಾರಿಯಾದುದು ಯಾಕೆಂದರೆ ಸರಿಯಾಗಿಲ್ಲದ ಒಂದು ಸಂಕೀರ್ಣ ವ್ಯವಸ್ಥೆಯನ್ನೂ ಸಹ ನಾವು ಸರಿಪಡಿಸಬಹುದು, ಅಲ್ಲದೇ ಭವಿಷ್ಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ನಿಶ್ಪ್ರಯೋಜಕವಾಗಿರುವ ರೆಟಿನಾದ ಸೆಲ್‌ಗಳನ್ನೂ ಈ ಚಿಕಿತ್ಸೆಯಿಂದ ಸರಿಪಡಿಸಬಹುದು" ಎಂದು ಅಧ್ಯಯನದ ನೇತೃತ್ವ ವಹಿಸಿರುವ ಕೋಷ ಜೀವಶಾಸ್ತ್ರಜ್ಞ ಹಾಗು ಇಂಡ್ಯಾನ ವಿಶ್ವವಿದ್ಯಾನಿಲಯದ ‘ಸ್ಕೂಲ್ ಆಫ್ ಸೈನ್ಸ್‘ ನ ಜೀವಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ|| ಜೇಸನ್ ಮೇಯರ್ ತಿಳಿಸಿದರು.

ಮ್ಯಾಕ್ಯುಲಾರ್ ಡಿಜನರೇಶನ್ ಒಂದು ಸಾಮಾನ್ಯ ಕಣ್ಣಿನ ಕಾಯಿಲೆಯಾಗಿದ್ದು ವಿಶ್ವದಲ್ಲಿನ ಸುಮಾರು ೨೫-೩೦ ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸುಮಾರು ೧.೫ ಮಿಲಿಯನ್ ಜನರು ರೆಟಿನೈಟಿಸ್ ಪಿಗ್‌ಮೆಂಟೋಸ ರೋಗದಿಂದ ಬಳಲುತ್ತಿದ್ದಾರೆ.

ಈ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳನ್ನು ಅದೇ ರೋಗಿಗಳಿಂದ ಪಡೆದುಕೊಳ್ಳುವುದರಿಂದಾಗಿ ಮುಂದೆ ಯಾವುದೇ ‘ಟ್ರಾನ್ಸ್‌ಪ್ಲಾಂಟ್ ರಿಜಕ್ಷನ್‘ ಅಂತಹ ಸಮಸ್ಯೆಗಳು ತಲೆದೋರುವುದಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಇಂತಹ ಅವಿಷ್ಕಾರಗಳು ಮನುಕುಲದ ಅನೇಕ ಸಮಸ್ಯೆಗಳನ್ನು ಬಹುಮಟ್ಟಿಗೆ ನಿವಾರಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಸಂಶೋಧನೆಗಳು ನಡೆದು ಬೆಳಕನ್ನೇ ಕಾಣದವರ ಬಾಳನ್ನು ಬೆಳಗಲಿ ಎಂದು ಆಶಿಸೋಣ ಅಲ್ಲವೇ?

ಕೃಪೆ: ಸೈನ್ಸ್‌ಡೇಲಿ

Sunday, June 12, 2011

ಬಾಬಾ ರಾಮದೇವ್ ಕುರಿತು ದಿಗ್ವಿಜಯ್ ಕುಹಕ

ನಮಸ್ಕಾರ, ತುಂಬಾ ದಿನಗಳ ನಂತರ ಮತ್ತೆ ಬರೆಯುತ್ತಿದ್ದೇನೆ. ಜೂನ್ ೪ ರಂದು ದಟ್ಶ್‌ಕನ್ನಡದಲ್ಲಿ ಪ್ರಖಟವಾದ ನನ್ನ ಲೇಖನವನ್ನು ತುಸು ತಡವಾಗಿ ಇಲ್ಲಿಊ ಪ್ರಖಟಿಸುತ್ತಿದ್ದೇನೆ.

Hi, In this Article, I expressed my anger slightly regarding remarks made by Digvijay Singh about Baba Ramdev.

ಬಾಬಾ ರಾಮದೇವ್‌ಗೆ ಹೆದ್ರಲ್ಲ, ಅವರು ಸನ್ಯಾಸಿಯೇ ಅಲ್ಲ: ದಿಗ್ವಿಜಯ್  
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಬಾಬಾ ರಾಮದೇವ್ ಅವರು ಸನ್ಯಾಸಿಯೇ ಅಲ್ಲ, ಅವರೊಬ್ಬ ಉದ್ಯಮಿ ಎಂದು ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಅವರ ಉಪವಾಸಕ್ಕೇನೂ ನಾವು ಹೆದರುವುದಿಲ್ಲ ಎಂದಿದ್ದಾರೆ.
"ಉಪವಾಸ ಸತ್ಯಾಗ್ರಹಗಳಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲ. ಕಾನೂನಿನಿಂದ ಮಾತ್ರ ಇದು ಸಾಧ್ಯ" ಎಂದು ಉಪವಾಸ ಸತ್ಯಾಗ್ರದ ಪಿತಾಮಹ ಎಂದೇ ಲೋಕದೆಲ್ಲೆಡೆ ಪ್ರಸಿದ್ಧವಾಗಿರುವ ಮಹಾತ್ಮ ಗಾಂಧೀಜಿಯವರಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ನಾವೇನಾದರೂ ಬಾಬಾ ಅವರಿಗೆ ಹೆದರಿದ್ದಿದ್ದರೆ, ಪಕ್ಷವು ಅವರನ್ನೇ ಕಂಬಿಗಳ ಹಿಂದೆ ತಳ್ಳಿ ಬಿಡುತ್ತಿತ್ತು. ಬಾಬಾ ಈಗ ಉದ್ಯಮಿಯೇ ಆಗಿದ್ದು, ಬಾಬಾ ರಾಮದೇವ್ ಅವರು ಯೋಗ ಶಿಬಿರವೊಂದಕ್ಕೆ 50 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಅಲ್ಲಾ ಸ್ವಾಮಿ, ದಿಗ್ವಿಜಯ್ ಸಿಂಗ್‌ಅವರೇ, ಉದ್ಯಮಿಗಳೇನಾದರೂ ಕಪ್ಪು ಹಣವನ್ನು ವಾಪಾಸು ತರಿಸಲು ಸರಕಾರದ ಮೇಲೆ ಒತ್ತಡ ಹಾಕಬಾರದೇ? ಅವರಿಗೆ ಉಪವಾಸ ಸತ್ಯಾಗ್ರಹ ಮಾಡುವ ಹಕ್ಕಿಲ್ಲವೇ? ಬಾಬಾ ರಾಮದೇವ್ ಸನ್ಯಾಸಿಯೇ ಅಲ್ಲಾ ಉದ್ಯಮಿ ಎಂದು ಕರೆಯುವ ನೀವು ಅಂದರೆ ರಾಜಕಾರಣಿಗಳೂ ಈಗ ಉದ್ಯಮಿಗಳಾಗಿಲ್ಲವೇ? ನೀವು ಜನ ಸೇವಕರೇ?
ನನಗನಿಸುವ ಮಟ್ಟಿಗೆ ಬಾಬಾ ರಾಮದೇವ್ ಒಬ್ಬ ಭಾರತೀಯ ಸಂಸ್ಕೃತಿಯ ಪಾಲಕ ಹಾಗೂ ನಿಜವಾದ ಪ್ರತಿಪಾದಕರಂತೆ ಕಾಣುತ್ತಾರೆ. ಹಾಗಂತ ಬಾ ಬಾ ಅವರು ಒಬ್ಬ ಮಹಾತ್ಮ, ಎಲ್ಲಾ ಆರೋಪಗಳಿಂದ ಮುಕ್ತ, ಇತ್ಯಾದಿ-ಇತ್ಯಾದಿ ಎಂದು ನಾನು ಹೇಳಬಯಸುವುದಿಲ್ಲ. ಆದರೆ ಅವರೊಬ್ಬ ನಿಜವಾದ ಯೋಗ ಗುರು, ಮತ್ತು ಸಮಾಜದ ಬಗ್ಗೆ ಕಿಂಚಿತ್ ಕಳಕಳಿ ಇರುವ ವ್ಯಕ್ತಿ. ದಿಗ್ವಿಜಯ್ ಹೇಳಿದ ಹಾಗೆ ಯೋಗ ಶಿಬಿರಗಳಿಗೆ ರಾಮದೇವ್ ಹಣ ಪಡೆಯುವ ವಿಚಾರ ನನಗೆ ಗೊತ್ತಿಲ್ಲ; ಯೇಕೆಂದರೆ, ನನ್ನ ಸುತ್ತ-ಮುತ್ತ ನಾನು ಅನೇಕ ಯೋಗ ತರಬೇತಿ ನೀಡುವವರನ್ನು ನೋಡಿದ್ದೇನೆ. ಅವರಲ್ಲಿ ಹೆಚ್ಚಿನ ಜನ ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಆಶ್ರಮದಿಂದಲೇ ಕಲಿತು ಬಂದವರು. ಅವರಲ್ಲಿ ಕೆಲವರು ಉಚಿತವಾಗಿ ಯೋಗ ಕಲಿಸುತ್ತಾರೆ. ಇದನ್ನು ನೋಡಿದರೆ ದಿಗ್ವಿಜಯ್ ಮಾತನ್ನು ನಂಬಲು ಸಾದ್ಯವಿಲ್ಲ.
ಮತ್ತೊಂದು ಪ್ರಮುಖ ವಿಚಾರವೆಂದರೆ, ಉಪವಾಸ ಸತ್ಯಾಗ್ರಹಗಳು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಯಾವುದೇ ಪಾತ್ರವಹಿಸುವುದಿಲ್ಲವೆಂದಾದರೆ, ಅವು ಒಂದು ದೇಶ ಸ್ವತಂತ್ರಪಡೆಯುವುದಕ್ಕೆ ಹೇಗೆ ನೆರವಾಗಬಲ್ಲವು? ಒಂದು ಕಾಲಕ್ಕೆ ಮಹಾತ್ಮಾ ಗಾಂಧಿಯವರು ಮುನ್ನಡೆಸಿದ ಕಾಂಗ್ರೆಸ್ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಇಂತಹಾ ಹೇಳಿಕೆ ನೀಡಲು ದಿಗ್ವಿಜಯ್ ಸಿಂಗ್ ಅವರಿಗೆ ನಾಚಿಕೆಯಾಗುವುದಿಲ್ಲವೇ? ಈ ಉಪವಾಸ ಸತ್ಯಾಗ್ರಹ ಮಹಾತ್ಮಾ ಗಾಂಧಿಯವರ ಕೂಸಲ್ಲವೇ? ಇನ್ನು ಕಾಂಗ್ರೆಸ್ ಪಕ್ಷ ಬಾಬಾ ಅವರಿಗೆ ಹೆದರಿದ್ದರೆ ಅವರನ್ನೇ ಜೈಲಿಗೆ ಕಳಿಸುತ್ತಿದ್ದೆವು ಎಂಬ ದಿಗ್ವಿಜಯ್ ಮಾತು ದುರಹಂಕಾರದ ಪರಮಾವದಿ ಅಲ್ಲವೇ? ಒಂದು ವೇಳಿ ಹಾಗೆ ಮಾಡಿದರೆ ಬ್ರಿಟೀಷ್ ಸರಕಾರಕ್ಕೂ ಭಾರತೀಯ ಕಾಂಗ್ರೆಸ್ ಸರಕಾರಕ್ಕೂ ನಡುವೆ ಏನು ವ್ಯತ್ಯಾಸ?

ರಾಮದೇವ್ ಅವರಿಗೆ ಆರ್‌ಎಸ್‌ಎಸ್ ತನ್ನ ಬೆಂಬಲ ವ್ಯಖ್ತಪಡಿಸಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಯಾರೋ ಒಬ್ಬರನ್ನೋ ಅಥವಾ ಒಂದು ವರ್ಗವನ್ನೋ ತೃಪ್ತಿಪಡಿಸಲು ಮನಬಂದಂತೆ ಹೇಳಿಕೆಗಳನ್ನು ನೀಡುವುದು ಕೆಲವು ಕಾಂಗ್ರೆಸ್ ನಾಯಕರ ಹಳೆಯ ಚಾಳಿಯೂ ಹೌದು. ಅದಲ್ಲದೇ ಮೂಲೆಗುಂಪಾಗುತ್ತಿರುವ ಇಂತಹ ಕೆಲವರು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲೂ ಸಹ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಎಲ್ಲೋ ಒಂದು ಕಡೆ ಅವರು ತಮ್ಮ ಉಳಿವಿಗೆ ಇವುಗಳೇ ಕಾರಣ ಎಂಬ ಭ್ರಮೆಯಲ್ಲಿದ್ದಂತೆ ತೋರುತ್ತದೆ ಅಲ್ಲವೇ?


ಇನ್ನು ಕಾಂಗ್ರೆಸ್ ಅಥವಾ ಯುಪಿಏ ಬಾಬಾ ಅವರ ಹೋರಾಟಕ್ಕೆ ಹೆದರದೇ ಇದ್ದರೆ, ಕೇಂದ್ರ ಸರಕಾರವೇಕೆ ನಾಲ್ಕು ಮಂದಿ ಸಚಿವರು, ಸಂಪುಟ ಕಾರ್ಯದರ್ಶಿಗಳನ್ನೆಲ್ಲಾ
ವಿಮಾನ ನಿಲ್ದಾಣಕ್ಕೆ ಕಳುಹಿಸಿ ಸ್ವಾಗತಿಸಬೇಕಿತ್ತು ಎಂಬುದು ಅರ್ಥವಾಗುತ್ತಿಲ್ಲ.

ಈ ಮರ್ಕಟ ಮನಸ್ಸಿನ ರಾಜಕಾರಣಿಗಳು ಇನ್ನಾದರು ಇಂತಹ ದುರ್ಬುದ್ಧಿಯನ್ನು ಬಿಟ್ಟು ಜನಸೇವೆ ಮತ್ತು ದೇಶಸೇವೆಗಳನ್ನು ಕಿಂಚಿತ್ ಆದರೂ ಮಾಡಲಿ ಎಂದು ಆಶಿಸೋಣ ಅಲ್ಲವೇ?

ಯುಪಿಎ-ಕಾಂಗ್ರೆಸ್ ನಡುವೆ ಸಂಘರ್ಷ
ಈ ನಡುವೆ, ಬಾಬಾ ರಾಮದೇವ್ ಅವರು ಉಜ್ಜೈನಿಯಿಂದ ದೆಹಲಿಗೆ ಬಂದಿಳಿದಾಗ ನಾಲ್ಕು ಮಂದಿ ಮಂತ್ರಿ ಮಹೋದಯರು ವಿಮಾನ ನಿಲ್ದಾಣಕ್ಕೇ ಹೋಗಿ, ಬಾಗಿ ಸ್ವಾಗತಿಸಿರುವುದು ಕಾಂಗ್ರೆಸ್ ಮತ್ತು ಯುಪಿಎ
ಸರಕಾರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ವಿದೇಶದಲ್ಲಿರುವ ಕಪ್ಪು ಹಣದ ವಾಪಸಾತಿಗೆ ಒತ್ತಾಯಿಸಿ ಬಾಬಾ ರಾಮದೇವ್ ಅವರು ಶನಿವಾರದಿಂದ ನಡೆಸಲಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಕೇಂದ್ರ ಸರಕಾರದಲ್ಲಿ ತೀವ್ರ ಕಳವಳ ಸೃಷ್ಟಿಸಿತ್ತು.
ಈ ಬಗ್ಗೆ ಗುರುವಾರ ಸರಕಾರದ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಬಾಬಾ ಮನವೊಲಿಕೆ ನಿಟ್ಟಿನಲ್ಲಿ ನಾಲ್ಕು ಮಂದಿ ಹಿರಿಯ ಸಚಿವರಾದ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್, ಪ್ರಬೋಧ್ ಕಾಂತ್ ಸಹಾಯ್
ಮತ್ತು ಪಿ.ಕೆ.ಬನ್ಸಾಲ್ ಜತೆಗೆ ಸಂಪುಟ ಕಾರ್ಯದರ್ಶಿಗಳನ್ನೆಲ್ಲರನ್ನೂ ವಿಮಾನ ನಿಲ್ದಾಣಕ್ಕೆ ಕಳುಹಿಸಿರುವುದು ಯುಪಿಎಯಲ್ಲಿ ಅಸಮಾಧಾನ ಏಳಲು ಕಾರಣವಾಗಿದೆ.

ಬಾಬಾ ಅವರಿಗೆ ಇಷ್ಟು ಭರ್ಜರಿಯಾಗಿ ಸ್ವಾಗತ ಕೋರಿರುವುದರ ಬಗ್ಗೆ ಟೀಕೆಗಳು ಕೇಳಿಬರತೊಡಗಿದಂತೆ, ಈ ವಿಷಯದಿಂದ ದೂರ ಸರಿಯಲು ಕಾಂಗ್ರೆಸ್ ಪ್ರಯತ್ನಿಸಿತು. ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ
ಹೋಗುತ್ತಾರೆಂಬ ಸಂಗತಿ ನಮಗೆ ಗೊತ್ತೇ ಇರಲಿಲ್ಲ ಎಂದಿವೆ ಕಾಂಗ್ರೆಸ್ ಮೂಲಗಳು.

ಆರೆಸ್ಸೆಸ್ ಕೂಡ ಬೆಂಬಲ...
ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿರುವ ಸಂಗತಿಯೆಂದರೆ ಬಾಬಾ ರಾಮದೇವ್ ಹೋರಾಟಕ್ಕೆ ಆರೆಸ್ಸೆಸ್ ಕೂಡ ಬೆಂಬಲ ಘೋಷಿಸಿರುವುದು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್ ಕಾರ್ಯಕರ್ತರೆಲ್ಲರೂ
ಬಾಬಾ ರಾಮದೇವ್ ಜೊತೆಗೆ ಸೇರುತ್ತಾರೆ ಎಂದು ಆರೆಸ್ಸೆಸ್ ವಕ್ತಾರ ರಾಮಮಾಧವ್ ಘೋಷಿಸಿದ್ದಾರೆ.

ಈ ಕಾರಣಕ್ಕೆ ಇಂದು ತುರ್ತು ಸಭೆ ಸೇರಿರುವ ಉನ್ನತ ಮಟ್ಟದ ನಾಯಕರು, ಈ ವಿಷಯದ ಕುರಿತು ಜಾಗರೂಕ ಹೆಜ್ಜೆಯಿಡುವ ಕುರಿತು ಚಿಂತಿಸಲಿದ್ದಾರೆ.

Saturday, April 2, 2011

Third eye technical voluntary group (ತರ್ಡ್ ಐ ಟೆಕ್ನಿಕಲ್ ವಾಲೆನ್ಟರಿ ಗ್ರುಪ್)

Dear all, I am very happy to introduce you to the Third Eye technical voluntary group, a project of Keerthana charitable trust, which committed to improve the lives of visually impaireds and disableds with the help of technology. We are developing aids and softwares for visually impaireds and we are working closely with the open source software developers. You can visit our website for more information.

ತರ್ಡ್ ಐ ಟೆಕ್ನಿಕಲ್ ವಾಲೆನ್ಟರಿ ಗ್ರೂಪ್ ಎನ್ನುವುದು ಕೀರ್ತನಾ ಚಾರಿಟೆಬಲ್ ಟ್ರಷ್ಟಿನ ಒಂದು ಹೆಮ್ಮೆಯ ಪ್ರಾಜೆಕ್ಟ್. ನಾವು (TVG) ಅಂಧರ ಮತ್ತು ಇತರೆ ಅಂಗವಿಕಲರ ಜೀವನವನ್ನು ತಂತ್ರಞಾನದ ಸಹಾಯದಿಂದ ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ವೆಬ್‌ಸೈಟನ್ನು ನೋಡಿ. ನಾವು ಈಗಾಗಲೆ ಅನೇಕ ಸಾಫ್ಟ್ವೇರ್ ತಯಾರಿಸುತ್ತಿದ್ದೇವೆ ಹಾಗು ಅನೇಕ ಓಪನ್‌ಸೋರ್ಸ್ ಸಾಫ್ಟ್‌ವೇರ್ ತಯಾರಕರ ಜೊತೆ ಸಂಪರ್ಕದಲ್ಲಿದ್ದೇವೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

Sunday, March 27, 2011

ನಾವು (ಭಾರತೀಯರು) ಭಾರತೀಯರೇ?

We (Indians) are we? First read then think.

Summary: In this article, the author examins the concept of Unity in diversity of India, and he carefully observes some threats to the integrity of United India.

ನಾವು (ಭಾರತೀಯರು) ಭಾರತೀಯರೇ? ಯೋಚಿಸಿ,; ಈಕೆಳಗಿನ ಸಂಭಾಷಣೆ ಓದಿ.

ಒಮ್ಮೆ ಒಬ್ಬ ಅಮೆರಿಕನ್ ಪ್ರಜೆ ಭಾರತಕ್ಕೆ ಬಂದಿದ್ದನು. ಅವನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದನು. ಅದರ ಜೊತೆಯಲ್ಲಿಯೇ ಆಯಾ ಸ್ಥಳಗಳ ಕುರಿತು ಸ್ಥಳ ಚರಿತ್ರೆ, ಸಂಬಂಧಪಟ್ಟ ಪೌರಾನಿಕ ಹಿನ್ನೆಲೆ, ಮತ್ತು ಆ ಸ್ಥಳದ ಈಗಿನ ಮಹತ್ವ ಹೀಗೆ ಆ ಸ್ಥಳಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದನು. ಅವನಿಗೆ ಭಾರತದ ಅಗಾಧ ಪ್ರಾಕೃತಿಕ ಹಾಗು ಮಾನವ ಸಂಪನ್ಮೂಲದ ಬಗೆಗೂ ಅಪಾರ ಮಾಹಿತಿ ದೊರಕಿತು. ಅವನು ಭಾರತ ಪ್ರವಾಸ ಮುಗಿಸಿ ಸಂತೃಪ್ತನಾಗಿ ತನ್ನ ತಾಯ್ನಾಡಿಗೆ ಮರಳಿದನು. ಒಂದು ದಿನ ಅಮೇರಿಕಾದಲ್ಲಿ ಅವನಿಗೆ ಅವನ ಒಬ್ಬ ಭಾರತೀಯ ಸ್ನೇಹಿತ ಸಿಕ್ಕಿದನು. ಸ್ನೇಹಿತ: ‘ನಮ್ಮ ದೇಶ ಹೇಗಿದೆ?‘ ಅಮೆರಿಕನ್: ‘ಭಾರತ ಒಂದು ಸುಂದರ ಹಾಗು ಸಮೃದ್ಧ ದೇಶ. ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ; ಅಲ್ಲದೇ ಅತ್ಯಂತ ಶ್ರೀಮಂತ ಪುರಾತನ ಇತಿಹಾಸವನ್ನೂ ಹೊಂದಿದೆ.‘ ಈ ಮಾತು ಕೇಳಿ ಆ ಭಾರತೀಯ ಸ್ನೇಹಿತನಿಗೆ ತುಂಬಾ ಸಂತೋಷವಾಯಿತು. ಆಗ ಅವನು ಹೆಮ್ಮೆಯಿಂದ ‘ಭಾರತೀಯರ ಬಗ್ಗೆ ನಿನ್ನ ಅಭಿಪ್ರಾಯವೇನು?‘ ಅದಕ್ಕೆ ಅಮೆರಿಕನ್ ಆಶ್ಚರ್ಯದಿಂದ ‘ಭಾರತೀಯರು!? ಅವರು ಯಾರು? ನನಗೆ ಒಬ್ಬ ಭಾರತೀಯನು ಸಿಕ್ಕಲಿಲ್ಲ!‘ ಎಂದನು. ಅದಕ್ಕೆ ಸ್ನೇಹಿತ: ‘ಇದೇನಿದು ನಿನ್ನ ಹುಚ್ಚಾಟ? ಭಾರತದಲ್ಲಿ ಭಾರತೀಯರಲ್ಲದೇ ಬೇರೆ ಯಾರು ನಿನಗೆ ಸಿಗಲು ಸಾದ್ಯ?‘ ಎಂದು ತುಸು ಗಡುಸಾಗಿಯೇ ಕೇಳಿದನು. ಅದಕ್ಕೆ ಅಮೆರಿಕನ್ ಶಾಂತವಾಗಿಯೇ, ‘ಕಾಶ್ಮೀರದಲ್ಲಿ ಕಾಶ್ಮೀರಿ, ಪಂಜಾಬಿನಲ್ಲಿ ಪಂಜಾಬಿ, ಬಿಹಾರದಲ್ಲಿ ಬಿಹಾರಿ, ಮಹಾರಾಷ್ಟ್ರದಲ್ಲಿ ಮರಾಠ, ರಾಜಸ್ಥಾನದಲ್ಲಿ ಮಾರ್ವಾಡಿ, ಬಂಗಾಳದಲ್ಲಿ ಬಂಗಾಳಿ, ತಮಿಳುನಾಡಿನಲ್ಲಿ ತಮಿಳ, ಕರ್ನಾಟಕದಲ್ಲಿ ಕನ್ನಡಿಗ; ಇವರೆಲ್ಲರ ಜೊತೆ ಒಬ್ಬ ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ, ಹೀಗೆ ಅನೇಕರನ್ನು ನೋಡಿದೆ; ಆದರೆ ನೀನು ಹೇಳಿದ ಭಾರತೀಯರು ಮಾತ್ರ ಯಾರೂ ಸಿಗಲಿಲ್ಲ.

ಮೇಲಿನ ಸಂಭಾಷಣೆ ಎಷ್ಟು ಗಂಭೀರವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಇದು ಸತ್ಯವಲ್ಲವೇ? ಭಾರತದ ಈಗಿನ ಪರಿಸ್ಥಿತಿ ಹೀಗಾಗಿರಲು ಏನು ಕಾರಣ ಎನ್ನುವುದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಡೆ ನಾವು ವೈವಿಧ್ಯತೆಯಲ್ಲಿ ಏಕತೆ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ದುರದೃಷ್ಟಕ್ಕೆ ಬರೀ ವೈವಿಧ್ಯತೆ ಮಾತ್ರ ಉಳಿದುಕೊಂಡು ಏಕತೆ ಕಡಿಮೆಯಾಗುತ್ತಿದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟವಾದರೂ ನಮ್ಮಲ್ಲಿ ಹೆಚ್ಚುತ್ತಿರುವ ಪ್ರಾಂತೀಯತೆ, ದುರಭಿಮಾನ, ಮತಾಂಧತೆ, ಹಾಗು ಬ್ರಿಟೀಶರು ಬಿತ್ತಿ ಹೋದ ಒಡೆದು ಆಳುವ ನೀತಿ ನಮ್ಮ ರಾಜಕಾರಣಿಗಳಲ್ಲಿ ಬೆಳೆದು ಹೆಮ್ಮರವಾಗಿರುವುದು; ಹೀಗೆ ಹತ್ತು ಹಲವು ಕಾರಣಗಳಿವೆ. ಇದೆಲ್ಲದರ ಬಲಿಪಶುಗಳು ನಾವು ಅಂದರೆ ಭವ್ಯ್ಅ ಭಾರತದ ಸಾಮಾನ್ಯ ಪ್ರಜೆಗಳಾಗುತ್ತಿದ್ದೇವೆ. ಈ ಕಾರ್ಯಕ್ಕೆ ಕೆಲವು ಮತಾಂಧ ಬಾಹ್ಯ ಮತ್ತು ಆಮ್ತರಿಕ ಶಕ್ತಿಗಳೂ ಕುಮ್ಮಕ್ಕು ನೀಡುತ್ತಿವೆ. ಇದೆಲ್ಲವುಗಳಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ನಷ್ಟವಲ್ಲವೇ? ಆದ್ದರಿಂದ ನಾವು ನೀವೆಲ್ಲರೂ ಮೊದಲು ಭಾರತೀಯರಾಗೋಣ, ನಂತರ ನಮ್ಮ ನಮ್ಮ ಪ್ರಾಂಥ್ಯದವರು ಹಾಗು ಧರ್ಮದವರು, ಅಲ್ಲವೇ?

Translated from an email, some parts have been removed due to sentiments. ©(C) The author.

Wednesday, March 23, 2011

ಒಂದು ಸ್ಪಷ್ಟೀಕರಣ

ಈ ಲೇಖನವನ್ನು ಬರೆಯುತ್ತಿರುವ ಉದ್ದೇಶವೆಂದರೆ, ಪತ್ರಿಕೆಯ್ಒಂದರಲ್ಲಿ ಪ್ರಕಟವಾದ ನನ್ನ ಒಂದು ಅಭಿಪ್ರಾಯದ ಬಗ್ಗೆ ಕೆಲವರಿಗಿದ್ದ ಗೊಂದಲಗಳೂ ಮತ್ತು ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸುವುದು.

೧೭/೦೩/೨೦೧೧ರಂದುನಮ್ಮ ಮನೆಗೆ ಪತ್ರಕರ್ತರು ಬಂದಿದ್ದರು. ಅವರು ಕನ್ನಡ ಓದಬಲ್ಲ ಈಸ್ಪೀಕ್ ತಂತ್ರಾಂಶದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನ ಸಂದರ್ಶನ ಪಡೆದರು. ಸಂದರ್ಶನ ಮುಗಿದ ಮೇಲೆ ನಾನು ಮತ್ತು ಅವರು ಸ್ವಲ್ಪ ಹೊತ್ತು ಸುಮ್ಮನೆ ಲೋಕಾಭಿರಾಮ ಮಾತನಾಡುತ್ತಿದ್ದೆವು.
ಆ ಸಂದರ್ಬದಲ್ಲಿ ಬೇರೆ ಬೇರೆ ವಿಚಾರಗಳನ್ನೂ ನನ್ನ ಜೊತೆ ಚರ್ಚಿಸಿದರು. ಆಗ ತಾನೆ ಮುಗಿದಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಕೇಳಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ತಿಳಿದುಕೊಂಡ ನಾನು ಸಹಜವಾಗಿಯೇ ಸ್ವಲ್ಪ ಅಸಮಧಾನಗೊಂಡಿದ್ದೆ. ಅವರಿಗೆ ನಾನು ‘ಒಂದು ಭಾಷೆ ಬೆಳೆಯಲು ಅದನ್ನು ಜ್ಞಾನದಿಂದ ತುಂಬಬೇಕೇ ಹೊರತು ಸಮ್ಮೇಳನಗಳಿಂದಲ್ಲ. ಸಮ್ಮೇಳನಗಳನ್ನು ಮಾಡಲು ದುಡ್ಡು ಹಾಕುವ ಬದಲು ಕನ್ನಡ ಪುಸ್ತಕಗಳಿಗೆ ಸಹಾಯ ಧನ ನೀಡಬಹುದಿತ್ತು. ಇಂಗ್ಲೀಶ್ ಆಗಲಿ, ಮತ್ತಿತರೇ ವೇಗದಿಂದ ಬೆಳೆಯುತ್ತಿರುವ ಭಾಷೆಗಳಿಗೇನು ಸಮ್ಮೇಳನ ಮಾಡುತ್ತಾರಾ?‘ ಎಂದು ಕೇಳಿದ್ದೆ. ಇದರ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಅರ್ಥ ನಾನು ಸಮ್ಮೇಳನಗಳ ವಿರೋದಿ ಅಲ್ಲ. ಆದರೆ ಭಾಷೆಯನ್ನು ಬೆಳೆಸುವುದು ಮುಖ್ಯ. ಇದು ಸಮ್ಮೇಳನಗಳಿಂದ ಮಾತ್ರ ಸಾದ್ಯ ಎಂಬ ಕಲ್ಪನೆ ತಪ್ಪು ಎಂದು ಹೇಳಿದೆ ಅಷ್ಟೇ. . ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದು ಎರಡೇ ತಿಂಗಳೊಳಗೆ ವಿಶ್ವ ಕನ್ನಡ ಸಮ್ಮೇಳನದ ಅಗತ್ಯ ಏನಿತ್ತು? ಇರಲಿ, ನನ್ನ ವಿಚಾರ ಇಷ್ಟೇ; ಒಂದು ಭಾಷೆ ಬೆಳೆಯಲು ಅದು ಜ್ಞಾನದಿಂದ ಶ್ರೀಮಂತವಾಗಿರಬೇಕು ಮತ್ತೂ ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಯಾವುದೋ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಒಂದು ಭಾಷೆಯನ್ನು ಬಳಸಿಕೊಳ್ಳಬಾರದು. ಆಗ ಮಾತ್ರಾ ಅದು ಬೆಳೆಯಲು ಸಾದ್ಯ. ನಾನು ಈ ಲೇಖನವನ್ನು ಬರೆದ ಉದ್ದೇಶವೇನೆಂದರೆ, ಕೆಲವರು ಮೇಲೆ ಹೇಳಿದ ನನ್ನ ನಿಲುವನ್ನು ಠೀಕಿಸಿದ್ದರು, ಹಾಗು ನನ್ನನ್ನು ಸಮ್ಮೇಳನಗಳ ವಿರೋಧಿ ಎಂದೂ ಕರೆದರು. ಇದು ನನ್ನ ಮನಸ್ಸಿಗೆ ಕೊಂಚ ನೋವುಂಟು ಮಾಡಿರುವುದು ಸತ್ಯ; ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಾನು ಹೇಳುವ ಮಾತು ಇಷ್ಟೇ, ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚು ಜ್ಞಾನ ಬಂಡಾರವನ್ನು ತೆರೆದಿಡುವ ಪ್ರಯತ್ನ ನಡೆಯಬೇಕಾಗಿದೆ.. ಇದಕ್ಕೆ ಯಾರಿಗಾದರೂ ನಾನು ಸಹಾಯ ಮಾಡಬಹುದಾದರೆ ನಾನು ಧನ್ಯ. ಈಗ ನಾನು ಕೆಲವು ಸಣ್ಣ ಪುಟ್ಟ ಇಂಗ್ಲೀಶ್ ಕಥೆಗಳನ್ನು ಅನುವಾದಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಇದು ಇನ್ನೂ ಆರಂಭ ಅಷ್ಟೇ. ಮುಂದೆ ಕೆಲವು ಲೇಖನಗಳನ್ನೂ ಅನುವಾದ ಮಾಡುವ ಆಸೆ ಇದೆ. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಹೇಳಿದ ಈ ಮೇಲಿನ ಅಂಶಗಳು ಯಾರಲ್ಲಿ ಏನು ಅಭಿಪ್ರಾಯವನ್ನು ಉಂಟುಮಾಡಿದರೂ ಅದಕ್ಕೆ ನಾನು ಹೊಣೆಯಲ್ಲ. ಆದರೆ ನನ್ನ ಅಭಿಪ್ರಾಯ ಅಚಲ. ಇದು ಅಹಂಕಾರದ ಮಾತಲ್ಲ, ಇದು ಒಬ್ಬ ಸಾಮಾನ್ಯ ಕನ್ನಡಿಗನ ಕಳಕಳಿಯ ಮಾತು.

ನಿಮ್ಮವ, ಶ್ರೀಧರ್ ಟೀ ಎಸ್.

Sunday, March 20, 2011

ಹಣಮತ

ನನ್ನ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ. ಇಲ್ಲಿ ನನ್ನ ಮನಸ್ಸಿನ ದುಗುಡವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈ ಲೇಖನವನ್ನು ಪೂರ್ತಿ ಓದಿದ ಮೇಲೆ ಮಾತ್ರಾ ಈ ಶೀರ್ಶಿಕೆಯ ಮಹತ್ವ ನಿಮಗೆ ಅರ್ಥವಾಗುತ್ತದೆ.

ನೀತಿಗೆಟ್ಟ ರಾಜಕಾರಣಿಗಳಿಂದ ದೇಶದ ಮಾನ ಹರಾಜ್ ಅಂತ ಹೇಳಿಬಿಡುವುದು ಏನೂ ಕಷ್ಟವಲ್ಲ. ಪ್ರಧಾನ ಮಂತ್ರಿಗೆ ಇಷ್ಟು ಕಪ್ಪು ಹಣ ಬರುತ್ತದೆ, ಮುಖ್ಯ ಮಂತ್ರಿಗೆ ಇಷ್ಟು ಬರುತ್ತದೆ ಅಂತ ನಾವೆಲ್ಲರೂ ಆಗೊಮ್ಮೆ ಈಗೊಮ್ಮೆ ಮಾತನಾಡುವುದು ಸಾಮಾನ್ಯ. ಆದರೆ ಅದಕ್ಕೆ ಭವ್ಯ ಭಾರತದ ಮಹಾಜನತೆಯೇ ಅಂದರೆ ನಾವೇ ಕಾರಣ. ಇದೇ ದೇಶದ ನಿಜವಾದ ದುರಂತ. ಮುಖ್ಯ ಮಂತ್ರಿಗಾಗಲಿ, ಪ್ರಧಾನ ಮಂತ್ರಿಗಾಗಲಿ, ಅಥವಾ ಮತ್ತಾವ ರಾಜಕಾರಣಿಗಾಗಲಿ, ಅಧಿಕಾರಿಗಾಗಲಿ ಕಪ್ಪು ಹಣ ಬರುತ್ತದೆ ಎಂದು ನಾವು ಹೇಳಿಕೊಂಡು ತಿರುಗುವುದನ್ನೇ ಒಂದು ಚಟ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನು ಸಮಾಜದಲ್ಲಿ ಬುದ್ಧಿ ಜೀವಿಗಳು ಎಂದು ಕರೆಸಿಕೊಂಡವರಂತೂ ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ‘ರಾಜಕಾರಣಿಗಳು ಸಾಮಾನ್ಯರನ್ನು ಕೊಳ್ಳೆ ಹೊಡೆದು ಹಣ ಮಾಡುತ್ತಿದ್ದಾರೆ‘ ಅಂತೆಲ್ಲಾ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಇದೆಲ್ಲ ನಿಜಾನ ಅಂತ ನೀವು ಈಗಿನ ಕೇಂದ್ರ ಸರಕಾರದ ಮಾನ್ಯ ಗೃಹ ಮಂತ್ರಿಗಳನ್ನೊಮ್ಮೆ ಕೇಳಬೇಕು; ಇದಕ್ಕೆ ಅವರು ‘ಇಲ್ಲಪ್ಪ ನಾವು ಕಪ್ಪು ಹಣ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ನಿಜ, ಆದರೆ ಅದು ನಿಮಗಾಗಿ ಅಂದರೆ ಸಾಮಾನ್ಯ ಮತದಾರನಿಗಾಗಿ, ಬೇಕಾದರೆ ನನ್ನ ಕ್ಶೇತ್ರದಲ್ಲಿ ಕೇಳಿ ನೋಡಿ ವೋಟಿಗಾಗಿ ನಾನು ಎಶ್ಟು ಹಣ ಕೊಟ್ಟಿದ್ದೇನೆ ಅಂತ! ಇದು ನನ್ನೊಬ್ಬನ ಕಥೆ ಅಲ್ಲ, ಎಲ್ಲ ರಾಜಕಾರಣಿಗಳ ಪಾಡು ಇದೇ; ಆದರೆ ನನ್ನ ಸುದ್ದಿ ಮಾತ್ರ ವಿಕಿಲೀಕ್ಸ್ನಲ್ಲಿ ಬಂದಿದೆ ಅಷ್ಟೆ‘ ಅಂತ ತಟ್ಟನೆ ಹೇಲಿಬಿಡಬಹುದು! ಹಾಗೊಮ್ಮೆ ಅವರು ಹೇಳಿಬಿಟ್ಟರೆ? ಏನಿಲ್ಲ, ಆಗ ಬ್ರಷ್ಟಾಚಾರ ಮಾಡಿದ ನಿಜವಾದ ಅಪರಾಧಿಗಳು ನಾವೇ ಅಂದರೆ ಭವ್ಯ ಭಾರತದ ‘ಸತ್‘ (ಸತ್ತ) ಪ್ರಜೆಗಳೇ ಆಗಿಬಿಡುತ್ತೇವೆ! ಹಾಗಾದರೆ ಬ್ರಷ್ಟರನ್ನು ಕಟ್ಟಿಹಾಕುವವರು ಯಾರು? ಗೊತ್ತಿಲ್ಲ; ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು! ಅಂದರೆ? ಏನಿಲ್ಲ, ಪ್ರಭುಗಳೇ ಬ್ರಶ್ಟರು! ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಷ್ಟೆ!

‘ರಾಜಕಾರಣವು ಜನಸೇವೆ ಮಾಡುವ ಒಂದು ದಾರಿ ಎನ್ನುವ ನಂಬಿಕೆ ನಮ್ಮ ಜನರಲ್ಲಿ ಆಳವಾಗಿ ಬೇರೂರಿತ್ತು. ಅದನ್ನು ಸಾಕ್ಶ್ಯೀಕರಿಸಿದ ಅನೇಕ ರಾಜಕಾರಣಿಗಳು ಇದ್ದಾರೆ. ಅವರಲ್ಲಿ ಅತಿ ಮುಖ್ಯವಾದವರು ಲಾಲ್ಬಹದ್ದೂರ್ ಶಾಸ್ತ್ರಿ. ಆದರೆ ಈಗಿನ ರಾಜಕಾರಣಿಗಳೊ ರಾಜಕಾರಣ ದುಡ್ಡು ಮಾಡುವ ಒಂದು ಧಂದೆ ಎಂದುಕೊಂಡಿರುವುದು ಸುಸ್ಫಷ್ಟವಾಗಿದೆ. ಎಲ್ಲರಲ್ಲಿಯೂ ಧನದ್ದಾಹ ಮತ್ತು ಅಧಿಕಾರ ದಾಹಗಳು ತಾಂಡವವಾಡುತ್ತಿವೆ. ಅಧಿಕಾರ ಮತ್ತು ಹಣ ಇದ್ದರೆ ಬೇಕಾದ್ದನ್ನು ಮಾಡಬಹುದು ಎನ್ನುವುದು ಈ ಜನರ ಮನೋಭಾವನೆಯಾದಂತೆ ಕಾಣುತ್ತಿದೆ.‘ ಹೀಗೆಲ್ಲಾ ಮಾತನಾಡುವ ಜನರನ್ನು ನಾವು ನೋಡಿದ್ದೇವೆ, ಆದರೆ ಇದಕ್ಕೆ ಸಾಮಾನ್ಯರೂ ಹೊರತಲ್ಲ. ದುಡ್ಡು ಇಷ್ಟೇ ಸಾಕು ಎಂದು ಅಂದುಕೊಳ್ಳ್ಳುವವರು ಯಾರೂ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಬದಲ್ಲಿ ಅಂದರೆ ವೋಟು ಮಾಡುವ ನಾವೇ ಬ್ರಷ್ಟರಾದ ಮೇಲೆ ರಾಜಕಾರಣಿಗಳ ಬಗ್ಗೆ ಮಾತನಾಡುವ ಹಕ್ಕು ನಮಗೆಲ್ಲಿದೆ? ಅವರು ನಮ್ಮ ತೆರಿಗೆ ಹಣದಿಂದ ಕಪ್ಪು ಹಣ ಅಂದರೆ ಅಕ್ರಮ ಹಣ ಮಾಡುತ್ತಾರೆ, ಆದರೆ ಚುನಾವನಾಸಂದರ್ಬದಲ್ಲಿ ಅದನ್ನು ತಿರುಗಿ ಮತ್ತೆ ‘ಸತ್‘ (ಸತ್ತ) ಪ್ರಜೆಗಳಿಗೇ ನೀಡುತ್ತಾರಲ್ಲವೇ? ಈಗ ಯೋಚಿಸಿ ಯಾರು ಬ್ರಶ್ಟರು?

ಹೌದು, ಇದನ್ನೆಲ್ಲ ಯೋಚಿಸಿದರೆ ಅಪರಾಧಿ ಸ್ಥಾನದಲ್ಲಿ ನಾವೆ ಅಂದರೆ ದುಡ್ಡಿನ ಆಸೆಯಿಂದ ಹಾಗು ಜಾತಿಯ ಕಾರಣದಿಂದ ಮತ ನೀಡುವ ಜನಗಳು ನಿಲ್ಲುತ್ತೇವೆ. ನಾವು ಬೇವಿನ ಗಿಡ ನೆಟ್ಟು ಮಾವಿನ ಹಣ್ಣಿನ ಕನಸು ಕಂಡಂತಿದೆ ಈ ಬ್ರಷ್ಟಾಚಾರ ರಹಿತ ರಾಷ್ಟ್ರದ ಕಲ್ಪನೆ ಅಲ್ಲವೇ? ಇಂತಹ ರಾವಣರ ರಾಜ್ಯದಲ್ಲಿ ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಏನಾದರೂ ಈಗ ಇದ್ದಿದ್ದರೆ ಅವರು ಹೃದಯಾಘಾತದಿಂದಲೇ ಸತ್ತುಹೋಗುತ್ತಿದ್ದರೋ ಏನೋ! ಹೌದು ಇದು ನಾವುನೀವೆಲ್ಲ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಕಾಲ. ಈಗ ನಾವೆಲ್ಲರೂ ಹಣ ಮತ್ತು ಜಾತಿ ಮತ್ತಿತರ ಯಾವುದೇ ಆಮಿಶಗಳಿಗೆ ಒಳಗಾಗದೇ ಮತದಾನ ಮಾಡಬೇಕು ಮತ್ತು ನಮ್ಮ ದೇಶವನ್ನು ಉಳಿಸಿ ಬೆಳೆಸಬೇಕು ಅಲ್ಲವೇ? ಇದನ್ನು ಓದಿದ ನೀವೆಲ್ಲರೂ ಹಾಗಂತ ಪ್ರತಿಜ್ಞೆ ಮಾಡಿದರೆ ನಾನು ಬರೆದ ಈ ಪುಟ್ಟ ಲೇಖನ ಸಾರ್ತಕವಾದಂತೆ.

In this article I am expressed my opinion on current political situation, and how corruption has become inevitable because of the people. In short the corruption is increasing rapidly amongst politicians because of the people accept money for voting in India. This has become evident after wikileeks' report.

Tuesday, March 15, 2011

ನಾನು ಮತ್ತು ನನ್ನ ಅಂಧತ್ವ.

Dear all here I tried to tell about me and my blindness in my mother tongue kannada. Here I have given an introduction about me, my education, and the factors which influenced my life. I also told about my nature of extra criticism of the things which I don't like.

ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಬಸಿ ಎಂಬ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವನು. ನಾನು ಹುಟ್ಟಿದ ಮೂರು-ನಾಲ್ಕು ತಿಂಗಳುಗಳ ಕಾಲ ನನ್ನ ಅಂಧತ್ವ ನನ್ನ ತಂದೆ ತಾಯಿಯರಿಗೆ ಗೊತ್ತಾಗಲೇ ಇಲ್ಲ. ಆದರೆ ಸತ್ಯ ಎಷ್ಟು ದಿನ ಹೊರ ಬರದೇ ಹಾಗೆಯೇ ಇರುತ್ತದೆ? ಒಂದು ದಿನ ಯಾವುದೋ ಕಾರಣಕ್ಕೆ ಅನುಮಾನ ಬಂದು ನನ್ನನ್ನು ಕಣ್ಣಿನ ವೈಧ್ಯರ ಬಳಿಗೆ ಕರೆದೊಯ್ದಾಗ ನನಗಿದ್ದ ದೃಷ್ಟಿ ದೋಶದ ಬಗೆಗೆ ಅವರಿಗೆ ತಿಳಿಯಿತು. ಆಗ ಆ ಕಣ್ಣಿನ ವೈಧ್ಯರು ನನ್ನ ದೃಷ್ಟಿ ತೀರಾ ದುರ್ಬಲವಾಗಿದೆ ಎಂದು ಒಂದು ಕನ್ನಡಕ ಕೊಟ್ಟರು. ಆದರೆ ನನಗೆ ತಿಳಿದ ಮಟ್ಟಿಗೆ ಅದು ಉಪಯೋಗವಾಗಲಿಲ್ಲ. ಅಂದರೆ ನನಗೆ ತಿಳಿದಂತೆ ನಾನು ಸ್ವಲ್ಪ ಬೆಳಕನ್ನು ಬಿಟ್ಟರೆ ಇನ್ನೇನನ್ನು ನೋಡಿಲ್ಲ. ಆ ಕಾಲದಲ್ಲಿ ನನ್ನ ಪೋಷಕರಿಗೆ ಅಂಧರಬಗ್ಗೆ ಹಾಗು ಅವರ ಶಿಕ್ಷಣದಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ನನ್ನನ್ನು ಕರೆದುಕೊಂಡು ಅನೇಕ ವೈಧ್ಯರ ಬಳಿ ಅಲೆದಾಡಿದರು. ಅಲೋಪತಿ, ಆಯುರ್‌ವೇದ, ಹೋಮಿಯೋಪತಿ ಹೀಗೆ ಕಂಡ ಕಂಡ ವೈಧ್ಯಕೀಯ ಪದ್ಧತಿಯನ್ನು ನಂಬಿಕೊಂಡು ಆಯಾ ಪದ್ಧತಿಗಳ ವೈಧ್ಯರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಆದರೆ ದುರದೃಷ್ಟವಶಾತ್ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯದಲ್ಲಿ ನನಗೆ ಆರು ವರ್ಷ ತುಂಬುವ ಹೊತ್ತಿಗೆ ನಮ್ಮ ಊರಿನ ಬಳಿಯಲ್ಲೇ ಸಿದ್ಧಾಪುರ ಎಂಬಲ್ಲಿ ಅಂಧರಿಗಾಗಿಯೇ ಒಂದು ಶಾಲೆ ಪ್ರಾರಂಭವಾಯಿತು. ಆ ಶಾಲೆಗೆ ನಾನೇ ಮೊದಲ ವಿದ್ಯಾರ್ಥಿ. ಅಲ್ಲಿ ನಾನು ಬ್ರೈಲ್ ಎಂಬ ಅಂಧರಿಗಾಗಿಯೇ ಇರುವ ವಿಶೇಷ ಲಿಪಿಯಲ್ಲಿ ನನ್ನ ಶಿಕ್ಷಣವನ್ನು ಆರಂಭಿಸಿದೆ. ಈ ಹಂತದಲ್ಲಿ ನನಗೆ ನಾನು ಬೇರೆಯವರಿಗಿಂತ ವಿಭಿನ್ನವಾದ ಪದ್ಧತಿಯಲ್ಲಿ ಕಲಿಯುತ್ತಿರುವುದು ಅರಿವಿಗೆ ಬಂತು. ನಾನು ಶಾಲೆಯ ಬಗ್ಗೆ ನನ್ನದೇ ಆದ ಕೆಲವು ಕಲ್ಪನೆಗಳನ್ನು ಹೊಂದಿದ್ದೆ. ಏಕೆಂದರೆ ನಾನು ಸುಮಾರು ನಾಲ್ಕೈದು ವರ್ಷದವನಾಗಿದ್ದಾಗಿನಿಂದಲು ನನ್ನ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕನ ಶಾಲೆಗೆ ಆಗಾಗ ಹೋಗುತ್ತಿದ್ದೆ. ಆದರೆ ಆ ಶಾಲೆಯ ವಾತಾವರ್ಣ ಮತ್ತು ಈ ಶಾಲೆಯ ವಾತಾವರ್ಣಗಳು ಬೇರೆ ಬೇರೆಯಾಗಿದ್ದಿದ್ದು ನನ್ನ ಆ ಪುಟ್ಟ ಮನಸ್ಸಿಗೂ ಅರಿವಿಗೆ ಬಂತು. ಬಹುಶಹ ನಾನು ಈಗಿನಷ್ಟು ದೊಡ್ಡವನಾಗಿದ್ದರೆ ನನ್ನ ಅಪ್ಪನನ್ನು ಕೇಳುತ್ತಿದ್ದೆನೋ ಏನೋ! ಗೊತ್ತಿಲ್ಲ. ಆದರೆ ಅಲ್ಲಿನ ಶಿಕ್ಷಣಕ್ಕೆ ನಾನು ಹೊಂದಿಕೊಂಡು ನಾನೂ ಬ್ರೈಲ್ ಕಲಿಯತೊಡಗಿದೆ. ನನ್ನ ಮನಸ್ಸು ಪ್ರೌಢವಾಗುವ ಹೊತ್ತಿಗಾಗಲೆ ನನಗೆ ಅರಿವಿಲ್ಲದಂತೆ ನನಗೆ ಆತ್ಮವಿಶ್ವಾಸ ಬಂದು ಬಿಟ್ಟಿತ್ತು. ಬಹುಶಹಾ ಇದಕ್ಕೆ ನನ್ನ ಮನೆಯವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!

ನಾನು ಓದುತ್ತಿದ್ದ ಸಮಯದಲ್ಲಿ ನನಗೆ ಬೇಕಾದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ನನ್ನ ಅಜ್ಜನಿಂದ ಹಿಡಿದು ನಮ್ಮ ಮನೆಯ ಎಲ್ಲರೂ ನನಗೆ ಓದಿ ಹೇಳಿ ತುಂಬಾ ಸಹಾಯ ಮಾಡಿದರು. ಅವರೆಲ್ಲರ ನೆರವಿನ್ಇಂದ ಮತ್ತು ನನ್ನ ಗುರುಗಳ ಮಾರ್ಗದರ್ಶನದಿಂದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರದಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದೆ. ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ ನನಗೆ ಕಂಪ್ಯೂಟರಿನ ಬಗ್ಗೆ ಮತ್ತು ಅದನ್ನು ಅಂಧರು ಹೇಗೆ ಬಳಸುತ್ತಾರೆಂಬ ಬಗ್ಗೆ ತಿಳಿಯಿತು. ಕಂಪ್ಯೂಟರಿನಲ್ಲೇ ನನ್ನ ಶಿಕ್ಶಣ ಮುಂದುವರಿಸುವುದಾಗಿ ತೀರ್ಮಾನಿಸಿ ಮೈಸೂರಿನ ಜೆ.ಜೆ.ಎಸ್. ಪಾಲಿಟೆಕ್ನಿಕ್ ಫಾರ್ ಫಿಜಿಕಲಿ ಹ್ಯಾಂಡೀಕ್ಯಾಪ್‌ಡ್ ಸೇರಿದೆ. ಅಲ್ಲಿ ನನ್ನ ಕಂಪ್ಯೂಟರ್ ಡಿಪ್ಲೊಮಾವನ್ನು ಪೂರೈಸಿ ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಷ್ಟ್‌ಆಗಿ ಸ್ವಲ್ಪ ದಿನ ಕೆಲಸ ಮಾಡಿದೆ. ಈಗ ಅದೆಲ್ಲವನ್ನೂ ಬಿಟ್ಟು ಈಸ್ಪೀಕ್ ಎಂಬ ಟಿ.ಟಿ.ಎಸ್ ತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಶಣದ ಸಮಯದಲ್ಲಿ ನನ್ನ ಮನೆಯಲ್ಲಿ ನನಗೆ ಕೆಲವು ಮಹಾತ್ಮರ ಜೀವನ ಚರಿತ್ರೆಗಳು ಮತ್ತು ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನೂ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಓದಿ ಹೇಳುತ್ತಿದ್ದರು. ಅಲ್ಲದೇ ಟೀವೀ ಮತ್ತು ರೇಡಿಯೋಗಳನ್ನು ಕೇಳುತ್ತಿದ್ದೆ. ಇವುಗಳಿಂದಾಗಿ ನನ್ನ ಸಾಮಾನ್ಯ ಜ್ಞಾನ ಮತ್ತು ವೈಚಾರಿಕತೆ ಬೆಳೆಯಿತು. ಈ ಮದ್ಯೆ ನಾನು ಕಂಪ್ಯೂಟರ್ ಕಲಿತೆ. ಇದು ಮಹಾ ಜ್ಞಾನಭಂಡಾರವನ್ನೇ ನನ್ನ ಮುಂದೆ ತೆರೆದಿಟ್ಟಿತು. ಆದರೆ ನಾನು ಕನ್ನಡದಲ್ಲಿರುವ ಪಠ್ಯವನ್ನು ಕಂಪ್ಯೂಟರಿನ ಸಹಾಯದಿಂದ ಓದಲಾಗುತ್ತಿರಲಿಲ್ಲ. ಏಕೆಂದರೆ ನಾನು ಅಂಧನಾಗಿರುವುದರಿಂದ ಕಂಪ್ಯೂಟರಿನ್ಅ ಪರದೆಯ ಮೇಲೆ ಮೂಡುವ ಅಕ್ಶರಗಳನ್ನು ಧ್ವನಿ ರೂಪಕ್ಕೆ ಬದಲಾಯಿಸುವ ವಿಶೇಶ ತಂತ್ರಾಂಶದ ನೆರವು ಬೇಕಾಗುತ್ತದೆ. ಆದರೆ ಈ ವರೆಗೆ ಅಂತಹಾ ತಂತ್ರಾಂಶವು ಇಂಗ್ಲೀಶ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಅದು ಕನ್ನಡಕ್ಕೂ ಲಭ್ಯವಿದೆ. ಇದನ್ನು ಕನ್ನಡಕ್ಕೆ ತರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಬಗ್ಗೆ ಬೇರೆ ಯಾವಾಗಲಾದರೂ ಮಾತನಾಡೋಣ. ಇದರಿಂದಾಗಿ ಸಹಜವಾಗಿಯೇ ನಾನು ಎಲ್ಲವನ್ನು ಪ್ರಶ್ನೆ ಮಾಡತೊಡಗಿದೆ ಮತ್ತು ನನ್ನ ಮನಸ್ಸಿಗೆ ಸರಿ ಎನಿಸದ ವಸ್ತು ಮತ್ತು ವಿಚಾರಗಳನ್ನು ಠೀಕೆ ಮಾಡತೊಡಗಿದೆ. ಅದು ಈಗಲೂ ಹಾಗೆಯೇ ಮುಂದುವರಿದಿದೆ! ಬಹುಶಹಾ ಅಗತ್ಯಕಿಂತ ಸ್ವಲ್ಪ ಜಾಸ್ತಿ ಠೀಕಿಸಿಬಿಟ್ಟೆ ಎಂದೂ ಕೆಲವೊಮ್ಮೆ ನನ್ನ ಮನಸ್ಸಿಗೆ ಅನಿಸಿದ್ದುಂಟು. ಆದರೆ ಆಡಿದ ಮಾತನ್ನು ಹಿಂಪಡೆಯಲು ನಾನೇನು ರಾಜಕಾರಣಿಯೇ?!

ನನಗೆ ನನ್ನ ಶಾಲೆ ಮತ್ತು ಕಾಲೇಜಿನ ಅನುಭವಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಆದರೆ ಇವತ್ತಿಗೆ ಇಷ್ಟು ಸಾಕು. ಇಲ್ಲದ್ದಿದ್ದರೆ ಓದುತ್ತಿರುವ ನಿಮಗೆ ಮಾಹಿತಿಯ ಅಜೀರ್ಣ ಸಮಸ್ಯೆಯಾಗಬಹುದು! ಅಲ್ಲವೇ?

ಇಲ್ಲಿ ಹೇಳಿದ ಈಸ್ಪೀಕ್‌ನ ಬಗ್ಗೆ ಒಂದು ಆರ್ಟಿಕಲ್ ಈ ಬ್ಲಾಗ್‌ನಲ್ಲಿಯೇ ಬರೆದಿದ್ದೇನೆ ದಯವಿಟ್ಟು ಅದನ್ನು ನೋಡಿ.

In this article I focused on my education, but not in depth. I also have given information about Kannada TTS called eSpeak which was developed by mr. Jonathan duddington, A person from UK. He has included more than 70 languages in eSpeak. Kannada is also one amongst them. apart from that around 5-6 Indian languages are also available in that. For more information about eSpeak, please refer to an article regarding using Indian languages with NVDA and eSpeak.