ನನ್ನ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ. ಇಲ್ಲಿ ನನ್ನ ಮನಸ್ಸಿನ ದುಗುಡವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈ ಲೇಖನವನ್ನು ಪೂರ್ತಿ ಓದಿದ ಮೇಲೆ ಮಾತ್ರಾ ಈ ಶೀರ್ಶಿಕೆಯ ಮಹತ್ವ ನಿಮಗೆ ಅರ್ಥವಾಗುತ್ತದೆ.
ನೀತಿಗೆಟ್ಟ ರಾಜಕಾರಣಿಗಳಿಂದ ದೇಶದ ಮಾನ ಹರಾಜ್ ಅಂತ ಹೇಳಿಬಿಡುವುದು ಏನೂ ಕಷ್ಟವಲ್ಲ. ಪ್ರಧಾನ ಮಂತ್ರಿಗೆ ಇಷ್ಟು ಕಪ್ಪು ಹಣ ಬರುತ್ತದೆ, ಮುಖ್ಯ ಮಂತ್ರಿಗೆ ಇಷ್ಟು ಬರುತ್ತದೆ ಅಂತ ನಾವೆಲ್ಲರೂ ಆಗೊಮ್ಮೆ ಈಗೊಮ್ಮೆ ಮಾತನಾಡುವುದು ಸಾಮಾನ್ಯ. ಆದರೆ ಅದಕ್ಕೆ ಭವ್ಯ ಭಾರತದ ಮಹಾಜನತೆಯೇ ಅಂದರೆ ನಾವೇ ಕಾರಣ. ಇದೇ ದೇಶದ ನಿಜವಾದ ದುರಂತ. ಮುಖ್ಯ ಮಂತ್ರಿಗಾಗಲಿ, ಪ್ರಧಾನ ಮಂತ್ರಿಗಾಗಲಿ, ಅಥವಾ ಮತ್ತಾವ ರಾಜಕಾರಣಿಗಾಗಲಿ, ಅಧಿಕಾರಿಗಾಗಲಿ ಕಪ್ಪು ಹಣ ಬರುತ್ತದೆ ಎಂದು ನಾವು ಹೇಳಿಕೊಂಡು ತಿರುಗುವುದನ್ನೇ ಒಂದು ಚಟ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನು ಸಮಾಜದಲ್ಲಿ ಬುದ್ಧಿ ಜೀವಿಗಳು ಎಂದು ಕರೆಸಿಕೊಂಡವರಂತೂ ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ‘ರಾಜಕಾರಣಿಗಳು ಸಾಮಾನ್ಯರನ್ನು ಕೊಳ್ಳೆ ಹೊಡೆದು ಹಣ ಮಾಡುತ್ತಿದ್ದಾರೆ‘ ಅಂತೆಲ್ಲಾ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಇದೆಲ್ಲ ನಿಜಾನ ಅಂತ ನೀವು ಈಗಿನ ಕೇಂದ್ರ ಸರಕಾರದ ಮಾನ್ಯ ಗೃಹ ಮಂತ್ರಿಗಳನ್ನೊಮ್ಮೆ ಕೇಳಬೇಕು; ಇದಕ್ಕೆ ಅವರು ‘ಇಲ್ಲಪ್ಪ ನಾವು ಕಪ್ಪು ಹಣ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ನಿಜ, ಆದರೆ ಅದು ನಿಮಗಾಗಿ ಅಂದರೆ ಸಾಮಾನ್ಯ ಮತದಾರನಿಗಾಗಿ, ಬೇಕಾದರೆ ನನ್ನ ಕ್ಶೇತ್ರದಲ್ಲಿ ಕೇಳಿ ನೋಡಿ ವೋಟಿಗಾಗಿ ನಾನು ಎಶ್ಟು ಹಣ ಕೊಟ್ಟಿದ್ದೇನೆ ಅಂತ! ಇದು ನನ್ನೊಬ್ಬನ ಕಥೆ ಅಲ್ಲ, ಎಲ್ಲ ರಾಜಕಾರಣಿಗಳ ಪಾಡು ಇದೇ; ಆದರೆ ನನ್ನ ಸುದ್ದಿ ಮಾತ್ರ ವಿಕಿಲೀಕ್ಸ್ನಲ್ಲಿ ಬಂದಿದೆ ಅಷ್ಟೆ‘ ಅಂತ ತಟ್ಟನೆ ಹೇಲಿಬಿಡಬಹುದು! ಹಾಗೊಮ್ಮೆ ಅವರು ಹೇಳಿಬಿಟ್ಟರೆ? ಏನಿಲ್ಲ, ಆಗ ಬ್ರಷ್ಟಾಚಾರ ಮಾಡಿದ ನಿಜವಾದ ಅಪರಾಧಿಗಳು ನಾವೇ ಅಂದರೆ ಭವ್ಯ ಭಾರತದ ‘ಸತ್‘ (ಸತ್ತ) ಪ್ರಜೆಗಳೇ ಆಗಿಬಿಡುತ್ತೇವೆ! ಹಾಗಾದರೆ ಬ್ರಷ್ಟರನ್ನು ಕಟ್ಟಿಹಾಕುವವರು ಯಾರು? ಗೊತ್ತಿಲ್ಲ; ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು! ಅಂದರೆ? ಏನಿಲ್ಲ, ಪ್ರಭುಗಳೇ ಬ್ರಶ್ಟರು! ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಷ್ಟೆ!
‘ರಾಜಕಾರಣವು ಜನಸೇವೆ ಮಾಡುವ ಒಂದು ದಾರಿ ಎನ್ನುವ ನಂಬಿಕೆ ನಮ್ಮ ಜನರಲ್ಲಿ ಆಳವಾಗಿ ಬೇರೂರಿತ್ತು. ಅದನ್ನು ಸಾಕ್ಶ್ಯೀಕರಿಸಿದ ಅನೇಕ ರಾಜಕಾರಣಿಗಳು ಇದ್ದಾರೆ. ಅವರಲ್ಲಿ ಅತಿ ಮುಖ್ಯವಾದವರು ಲಾಲ್ಬಹದ್ದೂರ್ ಶಾಸ್ತ್ರಿ. ಆದರೆ ಈಗಿನ ರಾಜಕಾರಣಿಗಳೊ ರಾಜಕಾರಣ ದುಡ್ಡು ಮಾಡುವ ಒಂದು ಧಂದೆ ಎಂದುಕೊಂಡಿರುವುದು ಸುಸ್ಫಷ್ಟವಾಗಿದೆ. ಎಲ್ಲರಲ್ಲಿಯೂ ಧನದ್ದಾಹ ಮತ್ತು ಅಧಿಕಾರ ದಾಹಗಳು ತಾಂಡವವಾಡುತ್ತಿವೆ. ಅಧಿಕಾರ ಮತ್ತು ಹಣ ಇದ್ದರೆ ಬೇಕಾದ್ದನ್ನು ಮಾಡಬಹುದು ಎನ್ನುವುದು ಈ ಜನರ ಮನೋಭಾವನೆಯಾದಂತೆ ಕಾಣುತ್ತಿದೆ.‘ ಹೀಗೆಲ್ಲಾ ಮಾತನಾಡುವ ಜನರನ್ನು ನಾವು ನೋಡಿದ್ದೇವೆ, ಆದರೆ ಇದಕ್ಕೆ ಸಾಮಾನ್ಯರೂ ಹೊರತಲ್ಲ. ದುಡ್ಡು ಇಷ್ಟೇ ಸಾಕು ಎಂದು ಅಂದುಕೊಳ್ಳ್ಳುವವರು ಯಾರೂ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಬದಲ್ಲಿ ಅಂದರೆ ವೋಟು ಮಾಡುವ ನಾವೇ ಬ್ರಷ್ಟರಾದ ಮೇಲೆ ರಾಜಕಾರಣಿಗಳ ಬಗ್ಗೆ ಮಾತನಾಡುವ ಹಕ್ಕು ನಮಗೆಲ್ಲಿದೆ? ಅವರು ನಮ್ಮ ತೆರಿಗೆ ಹಣದಿಂದ ಕಪ್ಪು ಹಣ ಅಂದರೆ ಅಕ್ರಮ ಹಣ ಮಾಡುತ್ತಾರೆ, ಆದರೆ ಚುನಾವನಾಸಂದರ್ಬದಲ್ಲಿ ಅದನ್ನು ತಿರುಗಿ ಮತ್ತೆ ‘ಸತ್‘ (ಸತ್ತ) ಪ್ರಜೆಗಳಿಗೇ ನೀಡುತ್ತಾರಲ್ಲವೇ? ಈಗ ಯೋಚಿಸಿ ಯಾರು ಬ್ರಶ್ಟರು?
ಹೌದು, ಇದನ್ನೆಲ್ಲ ಯೋಚಿಸಿದರೆ ಅಪರಾಧಿ ಸ್ಥಾನದಲ್ಲಿ ನಾವೆ ಅಂದರೆ ದುಡ್ಡಿನ ಆಸೆಯಿಂದ ಹಾಗು ಜಾತಿಯ ಕಾರಣದಿಂದ ಮತ ನೀಡುವ ಜನಗಳು ನಿಲ್ಲುತ್ತೇವೆ. ನಾವು ಬೇವಿನ ಗಿಡ ನೆಟ್ಟು ಮಾವಿನ ಹಣ್ಣಿನ ಕನಸು ಕಂಡಂತಿದೆ ಈ ಬ್ರಷ್ಟಾಚಾರ ರಹಿತ ರಾಷ್ಟ್ರದ ಕಲ್ಪನೆ ಅಲ್ಲವೇ? ಇಂತಹ ರಾವಣರ ರಾಜ್ಯದಲ್ಲಿ ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಏನಾದರೂ ಈಗ ಇದ್ದಿದ್ದರೆ ಅವರು ಹೃದಯಾಘಾತದಿಂದಲೇ ಸತ್ತುಹೋಗುತ್ತಿದ್ದರೋ ಏನೋ! ಹೌದು ಇದು ನಾವುನೀವೆಲ್ಲ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಕಾಲ. ಈಗ ನಾವೆಲ್ಲರೂ ಹಣ ಮತ್ತು ಜಾತಿ ಮತ್ತಿತರ ಯಾವುದೇ ಆಮಿಶಗಳಿಗೆ ಒಳಗಾಗದೇ ಮತದಾನ ಮಾಡಬೇಕು ಮತ್ತು ನಮ್ಮ ದೇಶವನ್ನು ಉಳಿಸಿ ಬೆಳೆಸಬೇಕು ಅಲ್ಲವೇ? ಇದನ್ನು ಓದಿದ ನೀವೆಲ್ಲರೂ ಹಾಗಂತ ಪ್ರತಿಜ್ಞೆ ಮಾಡಿದರೆ ನಾನು ಬರೆದ ಈ ಪುಟ್ಟ ಲೇಖನ ಸಾರ್ತಕವಾದಂತೆ.
In this article I am expressed my opinion on current political situation, and how corruption has become inevitable because of the people. In short the corruption is increasing rapidly amongst politicians because of the people accept money for voting in India. This has become evident after wikileeks' report.
No comments:
Post a Comment