Tuesday, March 15, 2011

ನಾನು ಮತ್ತು ನನ್ನ ಅಂಧತ್ವ.

Dear all here I tried to tell about me and my blindness in my mother tongue kannada. Here I have given an introduction about me, my education, and the factors which influenced my life. I also told about my nature of extra criticism of the things which I don't like.

ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಬಸಿ ಎಂಬ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವನು. ನಾನು ಹುಟ್ಟಿದ ಮೂರು-ನಾಲ್ಕು ತಿಂಗಳುಗಳ ಕಾಲ ನನ್ನ ಅಂಧತ್ವ ನನ್ನ ತಂದೆ ತಾಯಿಯರಿಗೆ ಗೊತ್ತಾಗಲೇ ಇಲ್ಲ. ಆದರೆ ಸತ್ಯ ಎಷ್ಟು ದಿನ ಹೊರ ಬರದೇ ಹಾಗೆಯೇ ಇರುತ್ತದೆ? ಒಂದು ದಿನ ಯಾವುದೋ ಕಾರಣಕ್ಕೆ ಅನುಮಾನ ಬಂದು ನನ್ನನ್ನು ಕಣ್ಣಿನ ವೈಧ್ಯರ ಬಳಿಗೆ ಕರೆದೊಯ್ದಾಗ ನನಗಿದ್ದ ದೃಷ್ಟಿ ದೋಶದ ಬಗೆಗೆ ಅವರಿಗೆ ತಿಳಿಯಿತು. ಆಗ ಆ ಕಣ್ಣಿನ ವೈಧ್ಯರು ನನ್ನ ದೃಷ್ಟಿ ತೀರಾ ದುರ್ಬಲವಾಗಿದೆ ಎಂದು ಒಂದು ಕನ್ನಡಕ ಕೊಟ್ಟರು. ಆದರೆ ನನಗೆ ತಿಳಿದ ಮಟ್ಟಿಗೆ ಅದು ಉಪಯೋಗವಾಗಲಿಲ್ಲ. ಅಂದರೆ ನನಗೆ ತಿಳಿದಂತೆ ನಾನು ಸ್ವಲ್ಪ ಬೆಳಕನ್ನು ಬಿಟ್ಟರೆ ಇನ್ನೇನನ್ನು ನೋಡಿಲ್ಲ. ಆ ಕಾಲದಲ್ಲಿ ನನ್ನ ಪೋಷಕರಿಗೆ ಅಂಧರಬಗ್ಗೆ ಹಾಗು ಅವರ ಶಿಕ್ಷಣದಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ನನ್ನನ್ನು ಕರೆದುಕೊಂಡು ಅನೇಕ ವೈಧ್ಯರ ಬಳಿ ಅಲೆದಾಡಿದರು. ಅಲೋಪತಿ, ಆಯುರ್‌ವೇದ, ಹೋಮಿಯೋಪತಿ ಹೀಗೆ ಕಂಡ ಕಂಡ ವೈಧ್ಯಕೀಯ ಪದ್ಧತಿಯನ್ನು ನಂಬಿಕೊಂಡು ಆಯಾ ಪದ್ಧತಿಗಳ ವೈಧ್ಯರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಆದರೆ ದುರದೃಷ್ಟವಶಾತ್ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯದಲ್ಲಿ ನನಗೆ ಆರು ವರ್ಷ ತುಂಬುವ ಹೊತ್ತಿಗೆ ನಮ್ಮ ಊರಿನ ಬಳಿಯಲ್ಲೇ ಸಿದ್ಧಾಪುರ ಎಂಬಲ್ಲಿ ಅಂಧರಿಗಾಗಿಯೇ ಒಂದು ಶಾಲೆ ಪ್ರಾರಂಭವಾಯಿತು. ಆ ಶಾಲೆಗೆ ನಾನೇ ಮೊದಲ ವಿದ್ಯಾರ್ಥಿ. ಅಲ್ಲಿ ನಾನು ಬ್ರೈಲ್ ಎಂಬ ಅಂಧರಿಗಾಗಿಯೇ ಇರುವ ವಿಶೇಷ ಲಿಪಿಯಲ್ಲಿ ನನ್ನ ಶಿಕ್ಷಣವನ್ನು ಆರಂಭಿಸಿದೆ. ಈ ಹಂತದಲ್ಲಿ ನನಗೆ ನಾನು ಬೇರೆಯವರಿಗಿಂತ ವಿಭಿನ್ನವಾದ ಪದ್ಧತಿಯಲ್ಲಿ ಕಲಿಯುತ್ತಿರುವುದು ಅರಿವಿಗೆ ಬಂತು. ನಾನು ಶಾಲೆಯ ಬಗ್ಗೆ ನನ್ನದೇ ಆದ ಕೆಲವು ಕಲ್ಪನೆಗಳನ್ನು ಹೊಂದಿದ್ದೆ. ಏಕೆಂದರೆ ನಾನು ಸುಮಾರು ನಾಲ್ಕೈದು ವರ್ಷದವನಾಗಿದ್ದಾಗಿನಿಂದಲು ನನ್ನ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕನ ಶಾಲೆಗೆ ಆಗಾಗ ಹೋಗುತ್ತಿದ್ದೆ. ಆದರೆ ಆ ಶಾಲೆಯ ವಾತಾವರ್ಣ ಮತ್ತು ಈ ಶಾಲೆಯ ವಾತಾವರ್ಣಗಳು ಬೇರೆ ಬೇರೆಯಾಗಿದ್ದಿದ್ದು ನನ್ನ ಆ ಪುಟ್ಟ ಮನಸ್ಸಿಗೂ ಅರಿವಿಗೆ ಬಂತು. ಬಹುಶಹ ನಾನು ಈಗಿನಷ್ಟು ದೊಡ್ಡವನಾಗಿದ್ದರೆ ನನ್ನ ಅಪ್ಪನನ್ನು ಕೇಳುತ್ತಿದ್ದೆನೋ ಏನೋ! ಗೊತ್ತಿಲ್ಲ. ಆದರೆ ಅಲ್ಲಿನ ಶಿಕ್ಷಣಕ್ಕೆ ನಾನು ಹೊಂದಿಕೊಂಡು ನಾನೂ ಬ್ರೈಲ್ ಕಲಿಯತೊಡಗಿದೆ. ನನ್ನ ಮನಸ್ಸು ಪ್ರೌಢವಾಗುವ ಹೊತ್ತಿಗಾಗಲೆ ನನಗೆ ಅರಿವಿಲ್ಲದಂತೆ ನನಗೆ ಆತ್ಮವಿಶ್ವಾಸ ಬಂದು ಬಿಟ್ಟಿತ್ತು. ಬಹುಶಹಾ ಇದಕ್ಕೆ ನನ್ನ ಮನೆಯವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!

ನಾನು ಓದುತ್ತಿದ್ದ ಸಮಯದಲ್ಲಿ ನನಗೆ ಬೇಕಾದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ನನ್ನ ಅಜ್ಜನಿಂದ ಹಿಡಿದು ನಮ್ಮ ಮನೆಯ ಎಲ್ಲರೂ ನನಗೆ ಓದಿ ಹೇಳಿ ತುಂಬಾ ಸಹಾಯ ಮಾಡಿದರು. ಅವರೆಲ್ಲರ ನೆರವಿನ್ಇಂದ ಮತ್ತು ನನ್ನ ಗುರುಗಳ ಮಾರ್ಗದರ್ಶನದಿಂದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರದಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದೆ. ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ ನನಗೆ ಕಂಪ್ಯೂಟರಿನ ಬಗ್ಗೆ ಮತ್ತು ಅದನ್ನು ಅಂಧರು ಹೇಗೆ ಬಳಸುತ್ತಾರೆಂಬ ಬಗ್ಗೆ ತಿಳಿಯಿತು. ಕಂಪ್ಯೂಟರಿನಲ್ಲೇ ನನ್ನ ಶಿಕ್ಶಣ ಮುಂದುವರಿಸುವುದಾಗಿ ತೀರ್ಮಾನಿಸಿ ಮೈಸೂರಿನ ಜೆ.ಜೆ.ಎಸ್. ಪಾಲಿಟೆಕ್ನಿಕ್ ಫಾರ್ ಫಿಜಿಕಲಿ ಹ್ಯಾಂಡೀಕ್ಯಾಪ್‌ಡ್ ಸೇರಿದೆ. ಅಲ್ಲಿ ನನ್ನ ಕಂಪ್ಯೂಟರ್ ಡಿಪ್ಲೊಮಾವನ್ನು ಪೂರೈಸಿ ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಷ್ಟ್‌ಆಗಿ ಸ್ವಲ್ಪ ದಿನ ಕೆಲಸ ಮಾಡಿದೆ. ಈಗ ಅದೆಲ್ಲವನ್ನೂ ಬಿಟ್ಟು ಈಸ್ಪೀಕ್ ಎಂಬ ಟಿ.ಟಿ.ಎಸ್ ತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಶಣದ ಸಮಯದಲ್ಲಿ ನನ್ನ ಮನೆಯಲ್ಲಿ ನನಗೆ ಕೆಲವು ಮಹಾತ್ಮರ ಜೀವನ ಚರಿತ್ರೆಗಳು ಮತ್ತು ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನೂ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಓದಿ ಹೇಳುತ್ತಿದ್ದರು. ಅಲ್ಲದೇ ಟೀವೀ ಮತ್ತು ರೇಡಿಯೋಗಳನ್ನು ಕೇಳುತ್ತಿದ್ದೆ. ಇವುಗಳಿಂದಾಗಿ ನನ್ನ ಸಾಮಾನ್ಯ ಜ್ಞಾನ ಮತ್ತು ವೈಚಾರಿಕತೆ ಬೆಳೆಯಿತು. ಈ ಮದ್ಯೆ ನಾನು ಕಂಪ್ಯೂಟರ್ ಕಲಿತೆ. ಇದು ಮಹಾ ಜ್ಞಾನಭಂಡಾರವನ್ನೇ ನನ್ನ ಮುಂದೆ ತೆರೆದಿಟ್ಟಿತು. ಆದರೆ ನಾನು ಕನ್ನಡದಲ್ಲಿರುವ ಪಠ್ಯವನ್ನು ಕಂಪ್ಯೂಟರಿನ ಸಹಾಯದಿಂದ ಓದಲಾಗುತ್ತಿರಲಿಲ್ಲ. ಏಕೆಂದರೆ ನಾನು ಅಂಧನಾಗಿರುವುದರಿಂದ ಕಂಪ್ಯೂಟರಿನ್ಅ ಪರದೆಯ ಮೇಲೆ ಮೂಡುವ ಅಕ್ಶರಗಳನ್ನು ಧ್ವನಿ ರೂಪಕ್ಕೆ ಬದಲಾಯಿಸುವ ವಿಶೇಶ ತಂತ್ರಾಂಶದ ನೆರವು ಬೇಕಾಗುತ್ತದೆ. ಆದರೆ ಈ ವರೆಗೆ ಅಂತಹಾ ತಂತ್ರಾಂಶವು ಇಂಗ್ಲೀಶ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಅದು ಕನ್ನಡಕ್ಕೂ ಲಭ್ಯವಿದೆ. ಇದನ್ನು ಕನ್ನಡಕ್ಕೆ ತರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಬಗ್ಗೆ ಬೇರೆ ಯಾವಾಗಲಾದರೂ ಮಾತನಾಡೋಣ. ಇದರಿಂದಾಗಿ ಸಹಜವಾಗಿಯೇ ನಾನು ಎಲ್ಲವನ್ನು ಪ್ರಶ್ನೆ ಮಾಡತೊಡಗಿದೆ ಮತ್ತು ನನ್ನ ಮನಸ್ಸಿಗೆ ಸರಿ ಎನಿಸದ ವಸ್ತು ಮತ್ತು ವಿಚಾರಗಳನ್ನು ಠೀಕೆ ಮಾಡತೊಡಗಿದೆ. ಅದು ಈಗಲೂ ಹಾಗೆಯೇ ಮುಂದುವರಿದಿದೆ! ಬಹುಶಹಾ ಅಗತ್ಯಕಿಂತ ಸ್ವಲ್ಪ ಜಾಸ್ತಿ ಠೀಕಿಸಿಬಿಟ್ಟೆ ಎಂದೂ ಕೆಲವೊಮ್ಮೆ ನನ್ನ ಮನಸ್ಸಿಗೆ ಅನಿಸಿದ್ದುಂಟು. ಆದರೆ ಆಡಿದ ಮಾತನ್ನು ಹಿಂಪಡೆಯಲು ನಾನೇನು ರಾಜಕಾರಣಿಯೇ?!

ನನಗೆ ನನ್ನ ಶಾಲೆ ಮತ್ತು ಕಾಲೇಜಿನ ಅನುಭವಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಆದರೆ ಇವತ್ತಿಗೆ ಇಷ್ಟು ಸಾಕು. ಇಲ್ಲದ್ದಿದ್ದರೆ ಓದುತ್ತಿರುವ ನಿಮಗೆ ಮಾಹಿತಿಯ ಅಜೀರ್ಣ ಸಮಸ್ಯೆಯಾಗಬಹುದು! ಅಲ್ಲವೇ?

ಇಲ್ಲಿ ಹೇಳಿದ ಈಸ್ಪೀಕ್‌ನ ಬಗ್ಗೆ ಒಂದು ಆರ್ಟಿಕಲ್ ಈ ಬ್ಲಾಗ್‌ನಲ್ಲಿಯೇ ಬರೆದಿದ್ದೇನೆ ದಯವಿಟ್ಟು ಅದನ್ನು ನೋಡಿ.

In this article I focused on my education, but not in depth. I also have given information about Kannada TTS called eSpeak which was developed by mr. Jonathan duddington, A person from UK. He has included more than 70 languages in eSpeak. Kannada is also one amongst them. apart from that around 5-6 Indian languages are also available in that. For more information about eSpeak, please refer to an article regarding using Indian languages with NVDA and eSpeak.

2 comments: