Sunday, March 27, 2011

ನಾವು (ಭಾರತೀಯರು) ಭಾರತೀಯರೇ?

We (Indians) are we? First read then think.

Summary: In this article, the author examins the concept of Unity in diversity of India, and he carefully observes some threats to the integrity of United India.

ನಾವು (ಭಾರತೀಯರು) ಭಾರತೀಯರೇ? ಯೋಚಿಸಿ,; ಈಕೆಳಗಿನ ಸಂಭಾಷಣೆ ಓದಿ.

ಒಮ್ಮೆ ಒಬ್ಬ ಅಮೆರಿಕನ್ ಪ್ರಜೆ ಭಾರತಕ್ಕೆ ಬಂದಿದ್ದನು. ಅವನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದನು. ಅದರ ಜೊತೆಯಲ್ಲಿಯೇ ಆಯಾ ಸ್ಥಳಗಳ ಕುರಿತು ಸ್ಥಳ ಚರಿತ್ರೆ, ಸಂಬಂಧಪಟ್ಟ ಪೌರಾನಿಕ ಹಿನ್ನೆಲೆ, ಮತ್ತು ಆ ಸ್ಥಳದ ಈಗಿನ ಮಹತ್ವ ಹೀಗೆ ಆ ಸ್ಥಳಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದನು. ಅವನಿಗೆ ಭಾರತದ ಅಗಾಧ ಪ್ರಾಕೃತಿಕ ಹಾಗು ಮಾನವ ಸಂಪನ್ಮೂಲದ ಬಗೆಗೂ ಅಪಾರ ಮಾಹಿತಿ ದೊರಕಿತು. ಅವನು ಭಾರತ ಪ್ರವಾಸ ಮುಗಿಸಿ ಸಂತೃಪ್ತನಾಗಿ ತನ್ನ ತಾಯ್ನಾಡಿಗೆ ಮರಳಿದನು. ಒಂದು ದಿನ ಅಮೇರಿಕಾದಲ್ಲಿ ಅವನಿಗೆ ಅವನ ಒಬ್ಬ ಭಾರತೀಯ ಸ್ನೇಹಿತ ಸಿಕ್ಕಿದನು. ಸ್ನೇಹಿತ: ‘ನಮ್ಮ ದೇಶ ಹೇಗಿದೆ?‘ ಅಮೆರಿಕನ್: ‘ಭಾರತ ಒಂದು ಸುಂದರ ಹಾಗು ಸಮೃದ್ಧ ದೇಶ. ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ; ಅಲ್ಲದೇ ಅತ್ಯಂತ ಶ್ರೀಮಂತ ಪುರಾತನ ಇತಿಹಾಸವನ್ನೂ ಹೊಂದಿದೆ.‘ ಈ ಮಾತು ಕೇಳಿ ಆ ಭಾರತೀಯ ಸ್ನೇಹಿತನಿಗೆ ತುಂಬಾ ಸಂತೋಷವಾಯಿತು. ಆಗ ಅವನು ಹೆಮ್ಮೆಯಿಂದ ‘ಭಾರತೀಯರ ಬಗ್ಗೆ ನಿನ್ನ ಅಭಿಪ್ರಾಯವೇನು?‘ ಅದಕ್ಕೆ ಅಮೆರಿಕನ್ ಆಶ್ಚರ್ಯದಿಂದ ‘ಭಾರತೀಯರು!? ಅವರು ಯಾರು? ನನಗೆ ಒಬ್ಬ ಭಾರತೀಯನು ಸಿಕ್ಕಲಿಲ್ಲ!‘ ಎಂದನು. ಅದಕ್ಕೆ ಸ್ನೇಹಿತ: ‘ಇದೇನಿದು ನಿನ್ನ ಹುಚ್ಚಾಟ? ಭಾರತದಲ್ಲಿ ಭಾರತೀಯರಲ್ಲದೇ ಬೇರೆ ಯಾರು ನಿನಗೆ ಸಿಗಲು ಸಾದ್ಯ?‘ ಎಂದು ತುಸು ಗಡುಸಾಗಿಯೇ ಕೇಳಿದನು. ಅದಕ್ಕೆ ಅಮೆರಿಕನ್ ಶಾಂತವಾಗಿಯೇ, ‘ಕಾಶ್ಮೀರದಲ್ಲಿ ಕಾಶ್ಮೀರಿ, ಪಂಜಾಬಿನಲ್ಲಿ ಪಂಜಾಬಿ, ಬಿಹಾರದಲ್ಲಿ ಬಿಹಾರಿ, ಮಹಾರಾಷ್ಟ್ರದಲ್ಲಿ ಮರಾಠ, ರಾಜಸ್ಥಾನದಲ್ಲಿ ಮಾರ್ವಾಡಿ, ಬಂಗಾಳದಲ್ಲಿ ಬಂಗಾಳಿ, ತಮಿಳುನಾಡಿನಲ್ಲಿ ತಮಿಳ, ಕರ್ನಾಟಕದಲ್ಲಿ ಕನ್ನಡಿಗ; ಇವರೆಲ್ಲರ ಜೊತೆ ಒಬ್ಬ ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ, ಹೀಗೆ ಅನೇಕರನ್ನು ನೋಡಿದೆ; ಆದರೆ ನೀನು ಹೇಳಿದ ಭಾರತೀಯರು ಮಾತ್ರ ಯಾರೂ ಸಿಗಲಿಲ್ಲ.

ಮೇಲಿನ ಸಂಭಾಷಣೆ ಎಷ್ಟು ಗಂಭೀರವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಇದು ಸತ್ಯವಲ್ಲವೇ? ಭಾರತದ ಈಗಿನ ಪರಿಸ್ಥಿತಿ ಹೀಗಾಗಿರಲು ಏನು ಕಾರಣ ಎನ್ನುವುದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಡೆ ನಾವು ವೈವಿಧ್ಯತೆಯಲ್ಲಿ ಏಕತೆ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ದುರದೃಷ್ಟಕ್ಕೆ ಬರೀ ವೈವಿಧ್ಯತೆ ಮಾತ್ರ ಉಳಿದುಕೊಂಡು ಏಕತೆ ಕಡಿಮೆಯಾಗುತ್ತಿದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟವಾದರೂ ನಮ್ಮಲ್ಲಿ ಹೆಚ್ಚುತ್ತಿರುವ ಪ್ರಾಂತೀಯತೆ, ದುರಭಿಮಾನ, ಮತಾಂಧತೆ, ಹಾಗು ಬ್ರಿಟೀಶರು ಬಿತ್ತಿ ಹೋದ ಒಡೆದು ಆಳುವ ನೀತಿ ನಮ್ಮ ರಾಜಕಾರಣಿಗಳಲ್ಲಿ ಬೆಳೆದು ಹೆಮ್ಮರವಾಗಿರುವುದು; ಹೀಗೆ ಹತ್ತು ಹಲವು ಕಾರಣಗಳಿವೆ. ಇದೆಲ್ಲದರ ಬಲಿಪಶುಗಳು ನಾವು ಅಂದರೆ ಭವ್ಯ್ಅ ಭಾರತದ ಸಾಮಾನ್ಯ ಪ್ರಜೆಗಳಾಗುತ್ತಿದ್ದೇವೆ. ಈ ಕಾರ್ಯಕ್ಕೆ ಕೆಲವು ಮತಾಂಧ ಬಾಹ್ಯ ಮತ್ತು ಆಮ್ತರಿಕ ಶಕ್ತಿಗಳೂ ಕುಮ್ಮಕ್ಕು ನೀಡುತ್ತಿವೆ. ಇದೆಲ್ಲವುಗಳಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ನಷ್ಟವಲ್ಲವೇ? ಆದ್ದರಿಂದ ನಾವು ನೀವೆಲ್ಲರೂ ಮೊದಲು ಭಾರತೀಯರಾಗೋಣ, ನಂತರ ನಮ್ಮ ನಮ್ಮ ಪ್ರಾಂಥ್ಯದವರು ಹಾಗು ಧರ್ಮದವರು, ಅಲ್ಲವೇ?

Translated from an email, some parts have been removed due to sentiments. ©(C) The author.

Wednesday, March 23, 2011

ಒಂದು ಸ್ಪಷ್ಟೀಕರಣ

ಈ ಲೇಖನವನ್ನು ಬರೆಯುತ್ತಿರುವ ಉದ್ದೇಶವೆಂದರೆ, ಪತ್ರಿಕೆಯ್ಒಂದರಲ್ಲಿ ಪ್ರಕಟವಾದ ನನ್ನ ಒಂದು ಅಭಿಪ್ರಾಯದ ಬಗ್ಗೆ ಕೆಲವರಿಗಿದ್ದ ಗೊಂದಲಗಳೂ ಮತ್ತು ಅನುಮಾನಗಳನ್ನು ಪರಿಹರಿಸಲು ಪ್ರಯತ್ನಿಸುವುದು.

೧೭/೦೩/೨೦೧೧ರಂದುನಮ್ಮ ಮನೆಗೆ ಪತ್ರಕರ್ತರು ಬಂದಿದ್ದರು. ಅವರು ಕನ್ನಡ ಓದಬಲ್ಲ ಈಸ್ಪೀಕ್ ತಂತ್ರಾಂಶದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲು ನನ್ನ ಸಂದರ್ಶನ ಪಡೆದರು. ಸಂದರ್ಶನ ಮುಗಿದ ಮೇಲೆ ನಾನು ಮತ್ತು ಅವರು ಸ್ವಲ್ಪ ಹೊತ್ತು ಸುಮ್ಮನೆ ಲೋಕಾಭಿರಾಮ ಮಾತನಾಡುತ್ತಿದ್ದೆವು.
ಆ ಸಂದರ್ಬದಲ್ಲಿ ಬೇರೆ ಬೇರೆ ವಿಚಾರಗಳನ್ನೂ ನನ್ನ ಜೊತೆ ಚರ್ಚಿಸಿದರು. ಆಗ ತಾನೆ ಮುಗಿದಿದ್ದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆಯೂ ಕೇಳಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ತಿಳಿದುಕೊಂಡ ನಾನು ಸಹಜವಾಗಿಯೇ ಸ್ವಲ್ಪ ಅಸಮಧಾನಗೊಂಡಿದ್ದೆ. ಅವರಿಗೆ ನಾನು ‘ಒಂದು ಭಾಷೆ ಬೆಳೆಯಲು ಅದನ್ನು ಜ್ಞಾನದಿಂದ ತುಂಬಬೇಕೇ ಹೊರತು ಸಮ್ಮೇಳನಗಳಿಂದಲ್ಲ. ಸಮ್ಮೇಳನಗಳನ್ನು ಮಾಡಲು ದುಡ್ಡು ಹಾಕುವ ಬದಲು ಕನ್ನಡ ಪುಸ್ತಕಗಳಿಗೆ ಸಹಾಯ ಧನ ನೀಡಬಹುದಿತ್ತು. ಇಂಗ್ಲೀಶ್ ಆಗಲಿ, ಮತ್ತಿತರೇ ವೇಗದಿಂದ ಬೆಳೆಯುತ್ತಿರುವ ಭಾಷೆಗಳಿಗೇನು ಸಮ್ಮೇಳನ ಮಾಡುತ್ತಾರಾ?‘ ಎಂದು ಕೇಳಿದ್ದೆ. ಇದರ ಬಗ್ಗೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರ ಅರ್ಥ ನಾನು ಸಮ್ಮೇಳನಗಳ ವಿರೋದಿ ಅಲ್ಲ. ಆದರೆ ಭಾಷೆಯನ್ನು ಬೆಳೆಸುವುದು ಮುಖ್ಯ. ಇದು ಸಮ್ಮೇಳನಗಳಿಂದ ಮಾತ್ರ ಸಾದ್ಯ ಎಂಬ ಕಲ್ಪನೆ ತಪ್ಪು ಎಂದು ಹೇಳಿದೆ ಅಷ್ಟೇ. . ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದು ಎರಡೇ ತಿಂಗಳೊಳಗೆ ವಿಶ್ವ ಕನ್ನಡ ಸಮ್ಮೇಳನದ ಅಗತ್ಯ ಏನಿತ್ತು? ಇರಲಿ, ನನ್ನ ವಿಚಾರ ಇಷ್ಟೇ; ಒಂದು ಭಾಷೆ ಬೆಳೆಯಲು ಅದು ಜ್ಞಾನದಿಂದ ಶ್ರೀಮಂತವಾಗಿರಬೇಕು ಮತ್ತೂ ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಯಾವುದೋ ಒಂದು ಉದ್ದೇಶವನ್ನು ಈಡೇರಿಸಿಕೊಳ್ಳಲು ಒಂದು ಭಾಷೆಯನ್ನು ಬಳಸಿಕೊಳ್ಳಬಾರದು. ಆಗ ಮಾತ್ರಾ ಅದು ಬೆಳೆಯಲು ಸಾದ್ಯ. ನಾನು ಈ ಲೇಖನವನ್ನು ಬರೆದ ಉದ್ದೇಶವೇನೆಂದರೆ, ಕೆಲವರು ಮೇಲೆ ಹೇಳಿದ ನನ್ನ ನಿಲುವನ್ನು ಠೀಕಿಸಿದ್ದರು, ಹಾಗು ನನ್ನನ್ನು ಸಮ್ಮೇಳನಗಳ ವಿರೋಧಿ ಎಂದೂ ಕರೆದರು. ಇದು ನನ್ನ ಮನಸ್ಸಿಗೆ ಕೊಂಚ ನೋವುಂಟು ಮಾಡಿರುವುದು ಸತ್ಯ; ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಾನು ಹೇಳುವ ಮಾತು ಇಷ್ಟೇ, ನಮ್ಮ ಭಾಷೆಯಲ್ಲಿ ಹೆಚ್ಚು ಹೆಚ್ಚು ಜ್ಞಾನ ಬಂಡಾರವನ್ನು ತೆರೆದಿಡುವ ಪ್ರಯತ್ನ ನಡೆಯಬೇಕಾಗಿದೆ.. ಇದಕ್ಕೆ ಯಾರಿಗಾದರೂ ನಾನು ಸಹಾಯ ಮಾಡಬಹುದಾದರೆ ನಾನು ಧನ್ಯ. ಈಗ ನಾನು ಕೆಲವು ಸಣ್ಣ ಪುಟ್ಟ ಇಂಗ್ಲೀಶ್ ಕಥೆಗಳನ್ನು ಅನುವಾದಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಇದು ಇನ್ನೂ ಆರಂಭ ಅಷ್ಟೇ. ಮುಂದೆ ಕೆಲವು ಲೇಖನಗಳನ್ನೂ ಅನುವಾದ ಮಾಡುವ ಆಸೆ ಇದೆ. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಹೇಳಿದ ಈ ಮೇಲಿನ ಅಂಶಗಳು ಯಾರಲ್ಲಿ ಏನು ಅಭಿಪ್ರಾಯವನ್ನು ಉಂಟುಮಾಡಿದರೂ ಅದಕ್ಕೆ ನಾನು ಹೊಣೆಯಲ್ಲ. ಆದರೆ ನನ್ನ ಅಭಿಪ್ರಾಯ ಅಚಲ. ಇದು ಅಹಂಕಾರದ ಮಾತಲ್ಲ, ಇದು ಒಬ್ಬ ಸಾಮಾನ್ಯ ಕನ್ನಡಿಗನ ಕಳಕಳಿಯ ಮಾತು.

ನಿಮ್ಮವ, ಶ್ರೀಧರ್ ಟೀ ಎಸ್.

Sunday, March 20, 2011

ಹಣಮತ

ನನ್ನ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ. ಇಲ್ಲಿ ನನ್ನ ಮನಸ್ಸಿನ ದುಗುಡವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈ ಲೇಖನವನ್ನು ಪೂರ್ತಿ ಓದಿದ ಮೇಲೆ ಮಾತ್ರಾ ಈ ಶೀರ್ಶಿಕೆಯ ಮಹತ್ವ ನಿಮಗೆ ಅರ್ಥವಾಗುತ್ತದೆ.

ನೀತಿಗೆಟ್ಟ ರಾಜಕಾರಣಿಗಳಿಂದ ದೇಶದ ಮಾನ ಹರಾಜ್ ಅಂತ ಹೇಳಿಬಿಡುವುದು ಏನೂ ಕಷ್ಟವಲ್ಲ. ಪ್ರಧಾನ ಮಂತ್ರಿಗೆ ಇಷ್ಟು ಕಪ್ಪು ಹಣ ಬರುತ್ತದೆ, ಮುಖ್ಯ ಮಂತ್ರಿಗೆ ಇಷ್ಟು ಬರುತ್ತದೆ ಅಂತ ನಾವೆಲ್ಲರೂ ಆಗೊಮ್ಮೆ ಈಗೊಮ್ಮೆ ಮಾತನಾಡುವುದು ಸಾಮಾನ್ಯ. ಆದರೆ ಅದಕ್ಕೆ ಭವ್ಯ ಭಾರತದ ಮಹಾಜನತೆಯೇ ಅಂದರೆ ನಾವೇ ಕಾರಣ. ಇದೇ ದೇಶದ ನಿಜವಾದ ದುರಂತ. ಮುಖ್ಯ ಮಂತ್ರಿಗಾಗಲಿ, ಪ್ರಧಾನ ಮಂತ್ರಿಗಾಗಲಿ, ಅಥವಾ ಮತ್ತಾವ ರಾಜಕಾರಣಿಗಾಗಲಿ, ಅಧಿಕಾರಿಗಾಗಲಿ ಕಪ್ಪು ಹಣ ಬರುತ್ತದೆ ಎಂದು ನಾವು ಹೇಳಿಕೊಂಡು ತಿರುಗುವುದನ್ನೇ ಒಂದು ಚಟ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನು ಸಮಾಜದಲ್ಲಿ ಬುದ್ಧಿ ಜೀವಿಗಳು ಎಂದು ಕರೆಸಿಕೊಂಡವರಂತೂ ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ‘ರಾಜಕಾರಣಿಗಳು ಸಾಮಾನ್ಯರನ್ನು ಕೊಳ್ಳೆ ಹೊಡೆದು ಹಣ ಮಾಡುತ್ತಿದ್ದಾರೆ‘ ಅಂತೆಲ್ಲಾ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಇದೆಲ್ಲ ನಿಜಾನ ಅಂತ ನೀವು ಈಗಿನ ಕೇಂದ್ರ ಸರಕಾರದ ಮಾನ್ಯ ಗೃಹ ಮಂತ್ರಿಗಳನ್ನೊಮ್ಮೆ ಕೇಳಬೇಕು; ಇದಕ್ಕೆ ಅವರು ‘ಇಲ್ಲಪ್ಪ ನಾವು ಕಪ್ಪು ಹಣ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ನಿಜ, ಆದರೆ ಅದು ನಿಮಗಾಗಿ ಅಂದರೆ ಸಾಮಾನ್ಯ ಮತದಾರನಿಗಾಗಿ, ಬೇಕಾದರೆ ನನ್ನ ಕ್ಶೇತ್ರದಲ್ಲಿ ಕೇಳಿ ನೋಡಿ ವೋಟಿಗಾಗಿ ನಾನು ಎಶ್ಟು ಹಣ ಕೊಟ್ಟಿದ್ದೇನೆ ಅಂತ! ಇದು ನನ್ನೊಬ್ಬನ ಕಥೆ ಅಲ್ಲ, ಎಲ್ಲ ರಾಜಕಾರಣಿಗಳ ಪಾಡು ಇದೇ; ಆದರೆ ನನ್ನ ಸುದ್ದಿ ಮಾತ್ರ ವಿಕಿಲೀಕ್ಸ್ನಲ್ಲಿ ಬಂದಿದೆ ಅಷ್ಟೆ‘ ಅಂತ ತಟ್ಟನೆ ಹೇಲಿಬಿಡಬಹುದು! ಹಾಗೊಮ್ಮೆ ಅವರು ಹೇಳಿಬಿಟ್ಟರೆ? ಏನಿಲ್ಲ, ಆಗ ಬ್ರಷ್ಟಾಚಾರ ಮಾಡಿದ ನಿಜವಾದ ಅಪರಾಧಿಗಳು ನಾವೇ ಅಂದರೆ ಭವ್ಯ ಭಾರತದ ‘ಸತ್‘ (ಸತ್ತ) ಪ್ರಜೆಗಳೇ ಆಗಿಬಿಡುತ್ತೇವೆ! ಹಾಗಾದರೆ ಬ್ರಷ್ಟರನ್ನು ಕಟ್ಟಿಹಾಕುವವರು ಯಾರು? ಗೊತ್ತಿಲ್ಲ; ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು! ಅಂದರೆ? ಏನಿಲ್ಲ, ಪ್ರಭುಗಳೇ ಬ್ರಶ್ಟರು! ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಷ್ಟೆ!

‘ರಾಜಕಾರಣವು ಜನಸೇವೆ ಮಾಡುವ ಒಂದು ದಾರಿ ಎನ್ನುವ ನಂಬಿಕೆ ನಮ್ಮ ಜನರಲ್ಲಿ ಆಳವಾಗಿ ಬೇರೂರಿತ್ತು. ಅದನ್ನು ಸಾಕ್ಶ್ಯೀಕರಿಸಿದ ಅನೇಕ ರಾಜಕಾರಣಿಗಳು ಇದ್ದಾರೆ. ಅವರಲ್ಲಿ ಅತಿ ಮುಖ್ಯವಾದವರು ಲಾಲ್ಬಹದ್ದೂರ್ ಶಾಸ್ತ್ರಿ. ಆದರೆ ಈಗಿನ ರಾಜಕಾರಣಿಗಳೊ ರಾಜಕಾರಣ ದುಡ್ಡು ಮಾಡುವ ಒಂದು ಧಂದೆ ಎಂದುಕೊಂಡಿರುವುದು ಸುಸ್ಫಷ್ಟವಾಗಿದೆ. ಎಲ್ಲರಲ್ಲಿಯೂ ಧನದ್ದಾಹ ಮತ್ತು ಅಧಿಕಾರ ದಾಹಗಳು ತಾಂಡವವಾಡುತ್ತಿವೆ. ಅಧಿಕಾರ ಮತ್ತು ಹಣ ಇದ್ದರೆ ಬೇಕಾದ್ದನ್ನು ಮಾಡಬಹುದು ಎನ್ನುವುದು ಈ ಜನರ ಮನೋಭಾವನೆಯಾದಂತೆ ಕಾಣುತ್ತಿದೆ.‘ ಹೀಗೆಲ್ಲಾ ಮಾತನಾಡುವ ಜನರನ್ನು ನಾವು ನೋಡಿದ್ದೇವೆ, ಆದರೆ ಇದಕ್ಕೆ ಸಾಮಾನ್ಯರೂ ಹೊರತಲ್ಲ. ದುಡ್ಡು ಇಷ್ಟೇ ಸಾಕು ಎಂದು ಅಂದುಕೊಳ್ಳ್ಳುವವರು ಯಾರೂ ಇದ್ದಂತೆ ಕಾಣುತ್ತಿಲ್ಲ. ಇಂತಹ ಸಂದರ್ಬದಲ್ಲಿ ಅಂದರೆ ವೋಟು ಮಾಡುವ ನಾವೇ ಬ್ರಷ್ಟರಾದ ಮೇಲೆ ರಾಜಕಾರಣಿಗಳ ಬಗ್ಗೆ ಮಾತನಾಡುವ ಹಕ್ಕು ನಮಗೆಲ್ಲಿದೆ? ಅವರು ನಮ್ಮ ತೆರಿಗೆ ಹಣದಿಂದ ಕಪ್ಪು ಹಣ ಅಂದರೆ ಅಕ್ರಮ ಹಣ ಮಾಡುತ್ತಾರೆ, ಆದರೆ ಚುನಾವನಾಸಂದರ್ಬದಲ್ಲಿ ಅದನ್ನು ತಿರುಗಿ ಮತ್ತೆ ‘ಸತ್‘ (ಸತ್ತ) ಪ್ರಜೆಗಳಿಗೇ ನೀಡುತ್ತಾರಲ್ಲವೇ? ಈಗ ಯೋಚಿಸಿ ಯಾರು ಬ್ರಶ್ಟರು?

ಹೌದು, ಇದನ್ನೆಲ್ಲ ಯೋಚಿಸಿದರೆ ಅಪರಾಧಿ ಸ್ಥಾನದಲ್ಲಿ ನಾವೆ ಅಂದರೆ ದುಡ್ಡಿನ ಆಸೆಯಿಂದ ಹಾಗು ಜಾತಿಯ ಕಾರಣದಿಂದ ಮತ ನೀಡುವ ಜನಗಳು ನಿಲ್ಲುತ್ತೇವೆ. ನಾವು ಬೇವಿನ ಗಿಡ ನೆಟ್ಟು ಮಾವಿನ ಹಣ್ಣಿನ ಕನಸು ಕಂಡಂತಿದೆ ಈ ಬ್ರಷ್ಟಾಚಾರ ರಹಿತ ರಾಷ್ಟ್ರದ ಕಲ್ಪನೆ ಅಲ್ಲವೇ? ಇಂತಹ ರಾವಣರ ರಾಜ್ಯದಲ್ಲಿ ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಏನಾದರೂ ಈಗ ಇದ್ದಿದ್ದರೆ ಅವರು ಹೃದಯಾಘಾತದಿಂದಲೇ ಸತ್ತುಹೋಗುತ್ತಿದ್ದರೋ ಏನೋ! ಹೌದು ಇದು ನಾವುನೀವೆಲ್ಲ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಕಾಲ. ಈಗ ನಾವೆಲ್ಲರೂ ಹಣ ಮತ್ತು ಜಾತಿ ಮತ್ತಿತರ ಯಾವುದೇ ಆಮಿಶಗಳಿಗೆ ಒಳಗಾಗದೇ ಮತದಾನ ಮಾಡಬೇಕು ಮತ್ತು ನಮ್ಮ ದೇಶವನ್ನು ಉಳಿಸಿ ಬೆಳೆಸಬೇಕು ಅಲ್ಲವೇ? ಇದನ್ನು ಓದಿದ ನೀವೆಲ್ಲರೂ ಹಾಗಂತ ಪ್ರತಿಜ್ಞೆ ಮಾಡಿದರೆ ನಾನು ಬರೆದ ಈ ಪುಟ್ಟ ಲೇಖನ ಸಾರ್ತಕವಾದಂತೆ.

In this article I am expressed my opinion on current political situation, and how corruption has become inevitable because of the people. In short the corruption is increasing rapidly amongst politicians because of the people accept money for voting in India. This has become evident after wikileeks' report.

Tuesday, March 15, 2011

ನಾನು ಮತ್ತು ನನ್ನ ಅಂಧತ್ವ.

Dear all here I tried to tell about me and my blindness in my mother tongue kannada. Here I have given an introduction about me, my education, and the factors which influenced my life. I also told about my nature of extra criticism of the things which I don't like.

ನಾನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಬಸಿ ಎಂಬ ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದವನು. ನಾನು ಹುಟ್ಟಿದ ಮೂರು-ನಾಲ್ಕು ತಿಂಗಳುಗಳ ಕಾಲ ನನ್ನ ಅಂಧತ್ವ ನನ್ನ ತಂದೆ ತಾಯಿಯರಿಗೆ ಗೊತ್ತಾಗಲೇ ಇಲ್ಲ. ಆದರೆ ಸತ್ಯ ಎಷ್ಟು ದಿನ ಹೊರ ಬರದೇ ಹಾಗೆಯೇ ಇರುತ್ತದೆ? ಒಂದು ದಿನ ಯಾವುದೋ ಕಾರಣಕ್ಕೆ ಅನುಮಾನ ಬಂದು ನನ್ನನ್ನು ಕಣ್ಣಿನ ವೈಧ್ಯರ ಬಳಿಗೆ ಕರೆದೊಯ್ದಾಗ ನನಗಿದ್ದ ದೃಷ್ಟಿ ದೋಶದ ಬಗೆಗೆ ಅವರಿಗೆ ತಿಳಿಯಿತು. ಆಗ ಆ ಕಣ್ಣಿನ ವೈಧ್ಯರು ನನ್ನ ದೃಷ್ಟಿ ತೀರಾ ದುರ್ಬಲವಾಗಿದೆ ಎಂದು ಒಂದು ಕನ್ನಡಕ ಕೊಟ್ಟರು. ಆದರೆ ನನಗೆ ತಿಳಿದ ಮಟ್ಟಿಗೆ ಅದು ಉಪಯೋಗವಾಗಲಿಲ್ಲ. ಅಂದರೆ ನನಗೆ ತಿಳಿದಂತೆ ನಾನು ಸ್ವಲ್ಪ ಬೆಳಕನ್ನು ಬಿಟ್ಟರೆ ಇನ್ನೇನನ್ನು ನೋಡಿಲ್ಲ. ಆ ಕಾಲದಲ್ಲಿ ನನ್ನ ಪೋಷಕರಿಗೆ ಅಂಧರಬಗ್ಗೆ ಹಾಗು ಅವರ ಶಿಕ್ಷಣದಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ನನ್ನನ್ನು ಕರೆದುಕೊಂಡು ಅನೇಕ ವೈಧ್ಯರ ಬಳಿ ಅಲೆದಾಡಿದರು. ಅಲೋಪತಿ, ಆಯುರ್‌ವೇದ, ಹೋಮಿಯೋಪತಿ ಹೀಗೆ ಕಂಡ ಕಂಡ ವೈಧ್ಯಕೀಯ ಪದ್ಧತಿಯನ್ನು ನಂಬಿಕೊಂಡು ಆಯಾ ಪದ್ಧತಿಗಳ ವೈಧ್ಯರ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ಆದರೆ ದುರದೃಷ್ಟವಶಾತ್ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯದಲ್ಲಿ ನನಗೆ ಆರು ವರ್ಷ ತುಂಬುವ ಹೊತ್ತಿಗೆ ನಮ್ಮ ಊರಿನ ಬಳಿಯಲ್ಲೇ ಸಿದ್ಧಾಪುರ ಎಂಬಲ್ಲಿ ಅಂಧರಿಗಾಗಿಯೇ ಒಂದು ಶಾಲೆ ಪ್ರಾರಂಭವಾಯಿತು. ಆ ಶಾಲೆಗೆ ನಾನೇ ಮೊದಲ ವಿದ್ಯಾರ್ಥಿ. ಅಲ್ಲಿ ನಾನು ಬ್ರೈಲ್ ಎಂಬ ಅಂಧರಿಗಾಗಿಯೇ ಇರುವ ವಿಶೇಷ ಲಿಪಿಯಲ್ಲಿ ನನ್ನ ಶಿಕ್ಷಣವನ್ನು ಆರಂಭಿಸಿದೆ. ಈ ಹಂತದಲ್ಲಿ ನನಗೆ ನಾನು ಬೇರೆಯವರಿಗಿಂತ ವಿಭಿನ್ನವಾದ ಪದ್ಧತಿಯಲ್ಲಿ ಕಲಿಯುತ್ತಿರುವುದು ಅರಿವಿಗೆ ಬಂತು. ನಾನು ಶಾಲೆಯ ಬಗ್ಗೆ ನನ್ನದೇ ಆದ ಕೆಲವು ಕಲ್ಪನೆಗಳನ್ನು ಹೊಂದಿದ್ದೆ. ಏಕೆಂದರೆ ನಾನು ಸುಮಾರು ನಾಲ್ಕೈದು ವರ್ಷದವನಾಗಿದ್ದಾಗಿನಿಂದಲು ನನ್ನ ದೊಡ್ಡಪ್ಪನ ಮಗಳು ಅಂದರೆ ನನ್ನ ಅಕ್ಕನ ಶಾಲೆಗೆ ಆಗಾಗ ಹೋಗುತ್ತಿದ್ದೆ. ಆದರೆ ಆ ಶಾಲೆಯ ವಾತಾವರ್ಣ ಮತ್ತು ಈ ಶಾಲೆಯ ವಾತಾವರ್ಣಗಳು ಬೇರೆ ಬೇರೆಯಾಗಿದ್ದಿದ್ದು ನನ್ನ ಆ ಪುಟ್ಟ ಮನಸ್ಸಿಗೂ ಅರಿವಿಗೆ ಬಂತು. ಬಹುಶಹ ನಾನು ಈಗಿನಷ್ಟು ದೊಡ್ಡವನಾಗಿದ್ದರೆ ನನ್ನ ಅಪ್ಪನನ್ನು ಕೇಳುತ್ತಿದ್ದೆನೋ ಏನೋ! ಗೊತ್ತಿಲ್ಲ. ಆದರೆ ಅಲ್ಲಿನ ಶಿಕ್ಷಣಕ್ಕೆ ನಾನು ಹೊಂದಿಕೊಂಡು ನಾನೂ ಬ್ರೈಲ್ ಕಲಿಯತೊಡಗಿದೆ. ನನ್ನ ಮನಸ್ಸು ಪ್ರೌಢವಾಗುವ ಹೊತ್ತಿಗಾಗಲೆ ನನಗೆ ಅರಿವಿಲ್ಲದಂತೆ ನನಗೆ ಆತ್ಮವಿಶ್ವಾಸ ಬಂದು ಬಿಟ್ಟಿತ್ತು. ಬಹುಶಹಾ ಇದಕ್ಕೆ ನನ್ನ ಮನೆಯವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರೇ!

ನಾನು ಓದುತ್ತಿದ್ದ ಸಮಯದಲ್ಲಿ ನನಗೆ ಬೇಕಾದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರಲಿಲ್ಲ. ಆ ಸಮಯದಲ್ಲಿ ನನ್ನ ಅಜ್ಜನಿಂದ ಹಿಡಿದು ನಮ್ಮ ಮನೆಯ ಎಲ್ಲರೂ ನನಗೆ ಓದಿ ಹೇಳಿ ತುಂಬಾ ಸಹಾಯ ಮಾಡಿದರು. ಅವರೆಲ್ಲರ ನೆರವಿನ್ಇಂದ ಮತ್ತು ನನ್ನ ಗುರುಗಳ ಮಾರ್ಗದರ್ಶನದಿಂದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರದಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮುಗಿಸಿದೆ. ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ ನನಗೆ ಕಂಪ್ಯೂಟರಿನ ಬಗ್ಗೆ ಮತ್ತು ಅದನ್ನು ಅಂಧರು ಹೇಗೆ ಬಳಸುತ್ತಾರೆಂಬ ಬಗ್ಗೆ ತಿಳಿಯಿತು. ಕಂಪ್ಯೂಟರಿನಲ್ಲೇ ನನ್ನ ಶಿಕ್ಶಣ ಮುಂದುವರಿಸುವುದಾಗಿ ತೀರ್ಮಾನಿಸಿ ಮೈಸೂರಿನ ಜೆ.ಜೆ.ಎಸ್. ಪಾಲಿಟೆಕ್ನಿಕ್ ಫಾರ್ ಫಿಜಿಕಲಿ ಹ್ಯಾಂಡೀಕ್ಯಾಪ್‌ಡ್ ಸೇರಿದೆ. ಅಲ್ಲಿ ನನ್ನ ಕಂಪ್ಯೂಟರ್ ಡಿಪ್ಲೊಮಾವನ್ನು ಪೂರೈಸಿ ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಷ್ಟ್‌ಆಗಿ ಸ್ವಲ್ಪ ದಿನ ಕೆಲಸ ಮಾಡಿದೆ. ಈಗ ಅದೆಲ್ಲವನ್ನೂ ಬಿಟ್ಟು ಈಸ್ಪೀಕ್ ಎಂಬ ಟಿ.ಟಿ.ಎಸ್ ತಂತ್ರಾಂಶದಲ್ಲಿ ಕನ್ನಡ ಭಾಷೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದೇನೆ.

ನನ್ನ ಪ್ರಾಥಮಿಕ ಶಿಕ್ಶಣದ ಸಮಯದಲ್ಲಿ ನನ್ನ ಮನೆಯಲ್ಲಿ ನನಗೆ ಕೆಲವು ಮಹಾತ್ಮರ ಜೀವನ ಚರಿತ್ರೆಗಳು ಮತ್ತು ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನೂ ಮತ್ತು ಕೆಲವು ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಓದಿ ಹೇಳುತ್ತಿದ್ದರು. ಅಲ್ಲದೇ ಟೀವೀ ಮತ್ತು ರೇಡಿಯೋಗಳನ್ನು ಕೇಳುತ್ತಿದ್ದೆ. ಇವುಗಳಿಂದಾಗಿ ನನ್ನ ಸಾಮಾನ್ಯ ಜ್ಞಾನ ಮತ್ತು ವೈಚಾರಿಕತೆ ಬೆಳೆಯಿತು. ಈ ಮದ್ಯೆ ನಾನು ಕಂಪ್ಯೂಟರ್ ಕಲಿತೆ. ಇದು ಮಹಾ ಜ್ಞಾನಭಂಡಾರವನ್ನೇ ನನ್ನ ಮುಂದೆ ತೆರೆದಿಟ್ಟಿತು. ಆದರೆ ನಾನು ಕನ್ನಡದಲ್ಲಿರುವ ಪಠ್ಯವನ್ನು ಕಂಪ್ಯೂಟರಿನ ಸಹಾಯದಿಂದ ಓದಲಾಗುತ್ತಿರಲಿಲ್ಲ. ಏಕೆಂದರೆ ನಾನು ಅಂಧನಾಗಿರುವುದರಿಂದ ಕಂಪ್ಯೂಟರಿನ್ಅ ಪರದೆಯ ಮೇಲೆ ಮೂಡುವ ಅಕ್ಶರಗಳನ್ನು ಧ್ವನಿ ರೂಪಕ್ಕೆ ಬದಲಾಯಿಸುವ ವಿಶೇಶ ತಂತ್ರಾಂಶದ ನೆರವು ಬೇಕಾಗುತ್ತದೆ. ಆದರೆ ಈ ವರೆಗೆ ಅಂತಹಾ ತಂತ್ರಾಂಶವು ಇಂಗ್ಲೀಶ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಅದು ಕನ್ನಡಕ್ಕೂ ಲಭ್ಯವಿದೆ. ಇದನ್ನು ಕನ್ನಡಕ್ಕೆ ತರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಆ ಬಗ್ಗೆ ಬೇರೆ ಯಾವಾಗಲಾದರೂ ಮಾತನಾಡೋಣ. ಇದರಿಂದಾಗಿ ಸಹಜವಾಗಿಯೇ ನಾನು ಎಲ್ಲವನ್ನು ಪ್ರಶ್ನೆ ಮಾಡತೊಡಗಿದೆ ಮತ್ತು ನನ್ನ ಮನಸ್ಸಿಗೆ ಸರಿ ಎನಿಸದ ವಸ್ತು ಮತ್ತು ವಿಚಾರಗಳನ್ನು ಠೀಕೆ ಮಾಡತೊಡಗಿದೆ. ಅದು ಈಗಲೂ ಹಾಗೆಯೇ ಮುಂದುವರಿದಿದೆ! ಬಹುಶಹಾ ಅಗತ್ಯಕಿಂತ ಸ್ವಲ್ಪ ಜಾಸ್ತಿ ಠೀಕಿಸಿಬಿಟ್ಟೆ ಎಂದೂ ಕೆಲವೊಮ್ಮೆ ನನ್ನ ಮನಸ್ಸಿಗೆ ಅನಿಸಿದ್ದುಂಟು. ಆದರೆ ಆಡಿದ ಮಾತನ್ನು ಹಿಂಪಡೆಯಲು ನಾನೇನು ರಾಜಕಾರಣಿಯೇ?!

ನನಗೆ ನನ್ನ ಶಾಲೆ ಮತ್ತು ಕಾಲೇಜಿನ ಅನುಭವಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ, ಆದರೆ ಇವತ್ತಿಗೆ ಇಷ್ಟು ಸಾಕು. ಇಲ್ಲದ್ದಿದ್ದರೆ ಓದುತ್ತಿರುವ ನಿಮಗೆ ಮಾಹಿತಿಯ ಅಜೀರ್ಣ ಸಮಸ್ಯೆಯಾಗಬಹುದು! ಅಲ್ಲವೇ?

ಇಲ್ಲಿ ಹೇಳಿದ ಈಸ್ಪೀಕ್‌ನ ಬಗ್ಗೆ ಒಂದು ಆರ್ಟಿಕಲ್ ಈ ಬ್ಲಾಗ್‌ನಲ್ಲಿಯೇ ಬರೆದಿದ್ದೇನೆ ದಯವಿಟ್ಟು ಅದನ್ನು ನೋಡಿ.

In this article I focused on my education, but not in depth. I also have given information about Kannada TTS called eSpeak which was developed by mr. Jonathan duddington, A person from UK. He has included more than 70 languages in eSpeak. Kannada is also one amongst them. apart from that around 5-6 Indian languages are also available in that. For more information about eSpeak, please refer to an article regarding using Indian languages with NVDA and eSpeak.

Saturday, March 12, 2011

ಜಪಾನ್ ದುರಂತ

Dear all, In this post I am going to analyse the Japan disaster in my words. The post is in Kannada. Here I have highlighted some similar events which took place around the words some years ago. Also I lit about the helpless of the human beings in such events though we are far more advanced in technology.

ಇತಿಹಾಸವು ಪ್ರಕೃತಿಯ ಅನೇಕ ರುದ್ರನರ್ತನಗಳನ್ನು ಮೂಕಪ್ರೇಕ್ಷಕನಾಗಿ ತನ್ನ ಗರ್ಬದಲ್ಲಿ ಸೇರಿಸಿಕೊಳ್ಳುತ್ತಾ ಬಂದಿದೆ. ಈ ಸಹಸ್ರಮಾನದ ಆದಿಯಲ್ಲಿ ಗುಜರಾತಿನ ಕಚ್ ಮತ್ತು ಬುಜ್‌ಗಳಲ್ಲಾದ ಭೂಕಂಪನ, ೨೦೦೪ ಡಿಸೆಂಬರ್‌ನಲ್ಲಾದ ಭೀಕರ ಸುನಾಮಿ, ಅಮೆರಿಕಾವನ್ನು ಕಂಗೆಡಿಸಿದ ೨೦೦೮ರ ಕತ್ರೀನಾ ಭೀಕರ ಚಂಡಮಾರುತ, ಹೇಟಿ ಎಂಬ ಅಮೆರಿಕಾ ಖಂಡದ ಒಂದು ಪುಟ್ಟ ದ್ವೀಪದಲ್ಲಾದ ಭಾರಿ ಭೂಕಂಪನ, ಇವುಗಳು ಇತ್ತೀಚೆಗೆ ನಡೆದ ಮನು ಕುಲ ಕಂಡ ಭಾರಿ ದುರಂತಗಳು. ಈ ಎಲ್ಲವುಗಳ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಪ್ರಕೃತಿ ತನ್ನ ಅಟ್ಟಹಾಸ ಮೆರೆದಿದೆ. ಈ ಬಾರಿ ಪ್ರಕೃತಿಯ ಅಟ್ಟಹಾಸಕ್ಕೆ ಗುರಿಯಾದುದು ಏಶಿಯಾದ ಒಂದು ಪುಟ್ಟ ರಾಷ್ಟ್ರ ಜಪಾನ್. ಹೌದು ಭೂಕಂಪನ ಮತ್ತು ಸುನಾಮಿಗಳು ತಮ್ಮ ಆಟವನ್ನು ಈ ಬಾರಿ ಜಪಾನೀಯರಿಗೆ ತೋರಿಸಿವೆ. ಆದರೆ ಜಪಾನ್ ಜನತೆಗೆ ಇದೇನು ಹೊಸದಲ್ಲ. ಇದೇ ರೀತಿಯ ಪರಿಸ್ಥಿತಿ ಸುಮಾರು ನೂರು ವರ‍್ಷಗಳ ಹಿಂದೆಯೂ ಅಂದರೆ ಸುಮಾರು ೧೯೨೩ ರ ಹೊತ್ತಿನಲ್ಲಿಯೂ ಬಂದಿತ್ತು. ಆಗ ಸುಮಾರು ೩೦,೦೦೦ ಜನ ಜಲಸಮಾದಿಯಾಗಿದ್ದರು. ಆದರೆ ಈ ಬಾರಿ ಇನ್ನೂ ಹೆಚ್ಚಿನ ಅನಾಹುತವಾದಂತೆ ಕಾಣುತ್ತದೆ.

ಜಪಾನ್ ಒಂದು ಪುಟ್ಟ ದೇಶ. ಈ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವ ಒಂದು ರಾಷ್ಟ್ರ. ಎರಡನೆ ಮಹಾಯುದ್ಧದಲ್ಲಿ ಅಮೆರಿಕಾದ ಅಣು ಬಾಂಬ್ ಧಾಳಿಗೆ ಗುರಿಯಾಗಿ ಅಪಾರ ನಷ್ಟವನ್ನು ಅನುಭವಿಸಿತು. ಆದರೆ ಅದೆಲ್ಲವನ್ನೂ ಮೀರಿ ಮತ್ತೊಮ್ಮೆ ತಲೆಯೆತ್ತಿ ವಿಷ್ವದ ಬೃಹತ್ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿ ನಿಂತಿತು. ಜಪಾನಿನ ಈ ಕ್ಷಿಪ್ರ ಗತಿಯ ಬೆಳವಣಿಗೆ ಅಮೆರಿಕಾವನ್ನೇ ನಾಚಿಸುವಂಥದ್ದು. ಆದರೆ ಪ್ರಕೃತಿಯ ಮುಂದೆ ಎಲ್ಲರೂ ಕುಬ್ಜರು ಎಂಬುದನ್ನು ಕಾಲ ಮತ್ತೊಮ್ಮೆ ನಿರೂಪಿಸಿದೆ.

ಜಪಾನಿನ ಸುನಾಮಿ ಪೀಡಿತ ಸ್ಥಳಗಳ ದೃಶ್ಯ ಮನ ಕಲಕುವಂಥದ್ದು. ಈ ಸುನಾಮಿಯು ಇಡಿ ಊರಿಗೆ ಊರನ್ನೇ ಕೊಚ್ಚಿಕೊಂಡು ಸಾಗರದ ಒಡಲಿಗೆ ಹಾಕಿದೆ. ಪ್ರಾಣ ಹಾನಿ ಆಸ್ತಿಪಾಸ್ತಿ ಹಾನಿಯನ್ನು ಇನ್ನೂ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಸುಮಾರು ೪೦,೦೦೦,೦ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗಾಯಗೊಂಡ ಹಾಗು ಬದುಕಿ ಉಳಿದ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇವರೆಲ್ಲರೂ ತಮ್ಮ ದುರ್ದೈವಕ್ಕೆ ಮರುಗುವಂತಾಗಿದೆ. ನೀವು ವಿಜ್ಞಾನದಲ್ಲಿ ಹಾಗು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ನನ್ನ ಹತ್ತಿರ ನಿಮ್ಮ ಆಟ ಏನು ನಡೆಯುವದಿಲ್ಲ ಎಂದು ಪ್ರಕೃತಿ ಮತ್ತೊಮ್ಮೆ ಮನು ಕುಲಕ್ಕೆ ಸಾರಿ ಹೇಳಿದೆ. ಇಂತಹ ಸಮಯದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರಿಗೆ ಆ ನೋವನ್ನು ಸಹಿಸಿಕೊಳ್ಳುವ ಷಕ್ತಿಯನ್ನು ನೀಡೆಂದು ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನಮಗೆ ಇನ್ನೇನೂ ದಾರಿ ಇಲ್ಲ. ಮುಂದಿನ ದಿನಗಳಲ್ಲಾದರು ಮಾನವನ ಮೇಲೆ ಪ್ರಕೃತಿ ಇಷ್ಟು ಉಘ್ರ ಕೋಪವನ್ನು ತಾಳದಿರಲೆಂದು ಆಶಿಸೋಣ ಅಲ್ಲವೇ? ಅದಕ್ಕೆ ಸರಿಯಾಗಿ ಮಾನವನ ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು ಅಲ್ಲವೇ?

ಈ ಘಟನೆಗಳನ್ನು ನೋಡಿದರೆ ಡಿ.ವಿ.ಜಿ. ಅವರ ಮಂಕು ತಿಮ್ಮನ ಕಗ್ಗವೊಂದು ನೆನಪಾಗುತ್ತದೆ.

---------

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ

NVDA with Kannada and other Indian languages

hi everybody, after a long time I am writing in my blog. For a change this time I am writing in my mother tongue. This article is about a TTS called eSpeak and its use in Kannada and some other Indian languages.

ಎಲ್ಲರಿಗೂ ನನ್ನ ನಮಸ್ಕಾರ. ಬಹಳ ದಿನಗಳ ನಂತರ ನಾನು ಮತ್ತೆ ಬ್ಲಾಗ್‌ನಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಬರಹ. ಈಗ ನಾನೂ ಕನ್ನಡದಲ್ಲಿ ಬರೆಯಬಲ್ಲೆ. ಇದಕ್ಕೆ ಸಹಾಯ ಮಾಡಿದ್ದು ಈಸ್ಪೀಕ್ ಎಂಬ ಕನ್ನಡ ಟೆಕ್ಸ್ಟ್ ಟು ಸ್ಪೀಚ್ (text to speech) ಅಂದರೆ ಕನ್ನಡದಲ್ಲಿ ಬರೆದ ಅಕ್ಷರಗಳನ್ನು ಧ್ವನಿ ಅಥವ ಮಾತಿನ ರೂಪಕ್ಕೆ ಬದಲಾಯಿಸುವ ಒಂದು ತಂತ್ರಾಂಶ. ಇದರ ಸಹಾಯದಿಂದಾಗಿ ನಾನೂ ಕನ್ನ್ನಡ ಬರೆಯಲು ಸಾಧ್ಯವಾಗಿದೆ. ಕನ್ನಡವಲ್ಲದೇ ಈ ತಂತ್ರಾಂಶದಲ್ಲಿ ಇನ್ನೂ ಅನೇಕ ಭಾಷೆಗಳಿವೆ. ಅವುಗಳಲ್ಲಿ ನಾಲ್ಕೈದು ಭಾರತೀಯ ಭಾಷೆಗಳೂ ಸೇರಿವೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ತಂತ್ರಾಂಶದ ಕರ್ತೃವಿನ ಬಗ್ಗೆ ಹೇಳದಿದ್ದರೆ ನನ್ನದು ದೊಡ್ಡ ಅಪಚಾರವೇ ಆಗುತ್ತದೆ. ಈ ತಂತ್ರಾಂಶವನ್ನು ಜೊನಾತನ್ ಡಡ್ಡಿಂಗ್‌ಟನ್ ಎಂಬ ಒಬ್ಬ ಆಂಗ್ಲ ವ್ಯಕ್ತಿ ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಉಚಿತ ಹಾಗು ಓಪನ್‌ಸೋರ್ಸ್ ತಂತ್ರಾಂಶವಾಗಿದೆ. ಇದರ ಕನ್ನಡ ರೂಪವನ್ನು ಸಿದ್ಧಪಡಿಸುವಲ್ಲಿ ನಾನು ನನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿಕೊಳ್ಳಲು ತುಂಬಾ ಖುಶಿಯಾಗುತ್ತಿದೆ. ಡಡ್ಡಿಂಗ್‌‌ಟನ್ ಅವರೇ ಎಲ್ಲಾ ಭಾಷೆಗಳನ್ನೂ ಈಸ್ಪೀಕ್ ತಂತ್ರಾಂಶದಲ್ಲಿ ಸೇರಿಸುತ್ತಾರೆ. ಆದರೆ ಅದಕ್ಕೆ ಆ ಭಾಷೆಯನ್ನು ಮಾತನಾಡುವವರ ನೆರವನ್ನು ಪಡೆದುಕೊಳ್ಳುತ್ತಾರೆ. ಇದುವರೆಗೆ ಈ ತಂತ್ರಾಂಶದಲ್ಲಿ ಸುಮಾರು ೭೪ ಭಾಷೆಗಳಿವೆ. ಇವುಗಳಲ್ಲಿ ಹಲವು ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಂಧರೇ ಡಡ್ಡಿಂಗ್‌ಟನ್ ಅವರಿಗೆ ನೆರವಾಗಿದ್ದಾರೆ.

ಈಗ ನೀವೇ ಹೇಳಿ, ಶ್ರೀ ಜೊನಾತನ್ ಡಡ್ಡಿಂಗ್‌ಟನ್ ಅವರು ನಿಜವಾದ ಸಮಾಜಸೇವಕರಲ್ಲವೇ? ಇವರು ಪ್ರಪಂಚದಾದ್ಯಂತ ಇರುವ ಬೇರೆ ಬೇರೆ ಭಾಷೆ ಮಾತನಾಡುವ ಅಂಧರಿಗೆ ಅವರವರ ಭಾಷೆಯಲ್ಲಿಯೇ ಜ್ಞಾನಭಂಡಾರವನ್ನು ತೆರೆದಿಡುವ ಧೀಮಂತ ಕೆಲಸವನ್ನು ಮಾಡಿದ್ದಾರೆ.

ಈ ತಂತ್ರಾಂಶವು ಎಲ್ಲಾ ಅಂದರಿಗೂ ಉಚಿತವಾಗಿ ಸಿಗಬೇಕೆಂಬುದೇ ನನ್ನ ಆಶೆಯ. ಆದುದರಿಂದ ನಾನು ಎನ್‌ವೀಡೀಏಎಂಬ ಉಚಿತ ಹಾಗು ಓಪನ್‌ಸೋರ್ಸ್ ಸ್ಕ್ರೀನ್‌ರೀಡರ್ ತಂತ್ರಾಂಶದೊಂದಿಗೆ ನೀಡುತ್ತಿದ್ದೇನೆ. ಇದು ಬರೀ ಅಂಧರಿಗಾಗಿ ಮಾತ್ರವಲ್ಲ. ಕನ್ನಡ ಭಾಷೆಯಲ್ಲಿ ಕಂಪ್ಯೂಟರನ್ನು ಮಾತನಾಡಿಸುವ ಆಶೆ ಹೊಂದಿರುವ ಎಲ್ಲರಿಗಾಗಿ.

ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ನೀವು ನೇರವಾಗಿ ನನ್ನನ್ನೇ ಸಂಪರ್ಕಿಸಬಹುದು.

ನನ್ನ ಈ-ಮೇಲ್ ವಿಳಾಸ: tss.abs@gmail.com
ನನ್ನ ಮೊಬೈಲ್ ಸಂಖ್ಯೆ: ೯೯೮೦೯೮೯೧೭೧.

ಕನ್ನಡ ಮಾತನಾಡಿಸಲು, ನಾನು ಕೊಟ್ಟಿರುವ ಜಿಪ್ ಫೈಲನ್ನು ನಿಮಗ್ಎ ಬೇಕಾದ ಜಾಗದಲ್ಲಿ ಎಕ್ಷ್ಟ್ರಾಕ್ಟ್ ಮಾಡಿಕೊಳ್ಳೀ ಮತ್ತು "NVDA.exe" ಅನ್ನು ರನ್ ಮಾಡಿ. ನಿಮ್ಮ ಕಂಪ್ಯೂಟರ್ ಕನ್ನಡದಲ್ಲಿ ಮಾತನಾಡುತ್ತದೆ!

ಇದರಲ್ಲಿ ಇತರೆ ಕೆಲವು ಭಾರತೀಯ ಭಾಷೆಗಳು ಸೇರಿವೆ. ಉದಾ: ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಉರ್ದೂ, ನೇಪಾಳಿ, ಇತರೆ.

ಗಮನಿಸಿ: ಈಸ್ಪೀಕ್ ಯುನಿಕೋಡ್ ಅಕ್ಷರಗಳನ್ನು ಮಾತ್ರ ಓದುತ್ತದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

If you want to use other Indian languages like, Panjabi, Urdu, Telugu, MalayaLam, Hindi, Nepali, Tamil, etc, follow the below given steps:

1. Extract the given file to any location, then run "NVDA.exe" file.
2. Press insert+n and select preferences menu itom in that menu.
3. Select the voice settings press enter or click on that.
4. A dialog box get open, in that a list box is there which lists all the available languages there select the desired language and press enter on that.
5. Again press insert+n and selecct "save configuration" and hit enter on that or click the left mouce button. You are done.

Note: The eSpeak reads the Indian language texts which are written only in Unicode.

Please click here to download.

ತಾಂತ್ರಿಕವಾಗಿ ಹೇಳುವುದಾದರೆ ಈ ತಂತ್ರಾಂಶವು ಫಾರ್‌ಮೆಂಟ್ ಸಿಂತಿಸಿಸ್ ಮೆತೆಡ್ (forment synthesis method) ಅನ್ನು ಬಳಸುತ್ತದೆ. ಇದರಲ್ಲಿ ಧ್ವನಿ ತರಂಗಗಳನ್ನು ಕಂಪ್ಯೂಟರೆ ಉತ್ಪತ್ತಿ ಮಾಡುತ್ತದೆ. ಆದುದರಿಂದ ಇದರ ಧ್ವನಿ ಮನುಷ್ಯರ ಧ್ವನಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ಅತಿ ಕಡಿಮೆ ಕಂಪ್ಯೂಟರ್ ಮೆಮೋರಿಯನ್ನು ಇದು ಉಪಯೋಗಿಸಿಕೊಳ್ಳುವುದರಿಂದ ಇದನ್ನು ಮೊಬೈಲ್ ಫೋನುಗಳಲ್ಲಿಯೂ ಬಳಸಿಕೊಳ್ಳುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಈಗಾಗಲೆ ಕೆಲಸ ಆರಂಭವಾಗಿದೆ. ಈ ತಂತ್ರಾಂಶವು ಎಸ್.ಎಸ್.ಎಂ.ಎಲ್ [SSML (Speech Synthesis Markup Language)] ಅನ್ನು ಸ್ವಲ್ಪ ಮಟ್ಟಿಗೆ ಬಳಸಿಕೊಂಡಿರುವುದರಿಂದ ಇದರ ಉಚ್ಚಾರಣೆಗಳನ್ನು ಸುಲಭವಾಗಿ ಬದಲಾಯಿಸಬಹುದು. ಈ ತಂತ್ರಾಂಶವನ್ನು ಇತರೆ ಧ್ವನಿ ಜನಕ ತಂತ್ರಾಂಶಗಳಿಗೆ ಫ್ರೆಂಟ್-ಎಂಡ್ (Front-end) ತಂತ್ರಾಂಶವಾಗಿಯೂ ಸಹಾ ಬಳಸಬಹುದಾಗಿದೆ. ಇದು "ವಿಂಡೋಸ್" (Windows) ಮತ್ತು "ಲೈನೆಕ್ಸ್" (Linux) ಕಂಪ್ಯೂಟರ್ ತಂತ್ರಾಂಶಗಳಲ್ಲಿ (opperating systems) ಲಭ್ಯವಿದೆ. ಇದನ್ನು ಯಾವುದೇ ಸ್ಕ್ರೀನ್‌ರೀಡರ್‌ಗಳ ಜೊತೆಗೂ ಉಪಯೋಗಿಸಬಹುದು. ಹೆಚ್ಚಿನ ತಾಂತ್ರಿಕ ಮಾಹಿತಿಗೆ ನನ್ನನ್ನು ಸಂಪರ್ಕಿಸಿ ಅಥವ ಇಲ್ಲಿ ಕ್ಲಿಕ್ಕಿಸಿ.