Friday, December 30, 2011

ಗಣಕದಲ್ಲಿ ಕನ್ನಡ

ಸಾಗರದ ಮಲೆನಾಡು ಮುದ್ರಕರ ಸಂಘದ ವಾರ್ಷಿಕ ಸಂಚಿಕೆಗೆ ನಾನು ಬರೆದ ಲೇಖನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.

‘ಕಂಪ್ಯೂಟರ್’ (ಗಣಕಯಂತ್ರ) ಎನ್ನುವ ಪದವನ್ನು ನಾವೆಲ್ಲರೂ ದಿನ ನಿತ್ಯದಲ್ಲಿ ಕೇಳಿಯೇ ಇರುತ್ತೇವೆ. ಯಾವುದೋ ಒಂದು ಖಾಸಗೀ/ಸರಕಾರಿ ಕೆಲಸಕ್ಕೆ ಬೇಕಾಗುವ ದಾಖಲೆಗಳನ್ನು ಮುದ್ರಣ ರೂಪದಲ್ಲಿ ಪಡೆಯುವುದರಿಂದ ಹಿಡಿದು ಚಲನಚಿತ್ರ ನೋಡುವ, ವಿವಿಧ ಆಟಗಳನ್ನು ಆಡುವ, ಬೇಕಾದ ಮಾಹಿತಿಗಳನ್ನು ಪ್ರಪಂಚದ ಹೆಚ್ಚೂ-ಕಡಿಮೆ ಯಾವುದೇ ಭಾಷೆಯಲ್ಲಿ ಪಡೆಯುವುದರವರೆಗೆ ಎಲ್ಲಾ ಕೆಲಸಕ್ಕೂ ಈ ‘ಗಣಕ ಯಂತ್ರ’ ಬೇಕು.

ಈ ‘ಗಣಕ ಯಂತ್ರ’ ವು ೨೦ ನೆಯ ಶತಮಾನದಲ್ಲಿ ವಿಜ್ಞಾನವು ಮನುಕುಲಕ್ಕೆ ನೀಡಿದ ಒಂದು ಅದ್ಬುತ ಹಾಗೂ ಅವಿಸ್ಮರಣೀಯ ಕೊಡುಗೆ. ಇದು ಎಂತಹಾ ಕ್ಲಿಷ್ಟಕರ ಸಮಸ್ಯೆಯನ್ನಾಗಲಿ ಕ್ಷಣಾರ್ಧದಲ್ಲಿ ಬಿಡಿಸಿ ಅದಕ್ಕೆ ಉತ್ತರವನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ಹೇಳುವುದಾದರೆ ಗಣಿತದ ಕೋಟಿಗಟ್ಟಲೇ ಸಂಖ್ಯೆಯನ್ನೊಳಗೊಂಡ ಲೆಕ್ಕವನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮಾಡಿ ಮುಗಿಸಿ ಅದರ ಉತ್ತರವನ್ನು ಬಳಕೆದಾರರಿಗೆ ನೀಡಬಲ್ಲದು. ಗಣಿತವಲ್ಲದೇ, ಪಠ್ಯ, ದೃಷ್ಯ, ಮತ್ತು ಧ್ವನಿಗಳಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡುವ ಮೂಲಕ ಮನುಷ್ಯನ ಕೆಲಸವನ್ನು ಬಹುಮಟ್ಟಿಗೆ ಕಡಿಮೆ ಮಾಡಿದೆ. ಕೋಟ್ಯಾಂತರ ಪುಟಗಳಷ್ಟು ಮಾಹಿತಿಯನ್ನು ತನ್ನ ಅತೀ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಗಣಕಯಂತ್ರಕ್ಕಿದೆ. ಇದು ಜಗತ್ತಿನ ಯಾವುದೇ ಭಾಷೆಯ ಮಾಹಿತಿಯನ್ನಾದರೂ ತನ್ನಲ್ಲಿ ಇಟ್ಟುಕೊಳ್ಳಬಲ್ಲದು.

ಗಣಕವು ಇಷ್ಟೆಲ್ಲಾ ಮಾಹಿತಿಯನ್ನು ಹೇಗೆ ತನ್ನ ಸಣ್ಣ ಸಣ್ಣ ಸ್ಮೃತಿಕೋಷದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ? ಗಣಕಕ್ಕೆ ನಿರ್ಧಿಷ್ಟ ಕಾರ್ಯವನ್ನು ಮಾಡಲು ಸೂಚನೆ ಕೊಡುವುದು ಹೇಗೇ? ಗಣಕಕ್ಕೆ ತನ್ನದೇ ಭಾಷೆಯಿದೆಯೇ? ಇದ್ದರೆ ಅದು ನಮ್ಮ ವಿವಿಧ ಭಾಷೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತದೆ? ನಮ್ಮ ಕನ್ನಡವೂ ಗಣಕದಲ್ಲಿದೆಯೇ? ಇಂತವೇ ಹತ್ತು-ಹಲವು ಪ್ರಶ್ನೆಗಳು ನಮಗೆ ಮೂಡಬಹುದು. ಅವುಗಳಿಗೆ ಉತ್ತರ ನೀಡುವ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಗಣಕವು ತನಗೆ ಕೊಟ್ಟ ಮಾಹಿತಿಗಳನ್ನು ಒಂದು ಗೊತ್ತಾದ ಸಂಕೇತಕ್ಕೆ ಪರಿವರ್ತಿಸಿ ತನ್ನ ಸ್ಮೃತಿಕೋಷದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಬಳಕೆದಾರರು ಯಾವಾಗಲೇ ಆ ಮಾಹಿತಿಯನ್ನು ಪಡೆಯ ಬಯಸಿದರೆ ಸೂಕ್ತ ಸೂಚನೆಗಳನ್ನು ಗಣಕಕ್ಕೆ ಕೊಡುವ ಮೂಲಕ ಆ ಮಾಹಿತಿಯನ್ನು ತತ್‌ಕ್ಷಣದಲ್ಲಿಯೇ ಪಡೆಯಬಹುದು.

ಗಣಕಕ್ಕೆ ಮಾಹಿತಿಗಳನ್ನು ಹಾಗು ಸೂಚನೆಯನ್ನು ಗಣಕದ ಕೀಲೀಮಣೆಯನ್ನು ಅಥವಾ ‘ಮೌಸ್’ ಅನ್ನು ಬಳಸಿ ನೀಡಲಾಗುತ್ತದೆ. ಈ ಸೂಚನೆಗಳ ಕುರಿತಾದ ಮಾಹಿತಿಯನ್ನು ಗಣಕಕ್ಕೆ ಮೊದಲೇ ‘ತಂತ್ರಾಂಶಗಳ’ ಮೂಲಕ ನೀಡಲಾಗಿರುತ್ತದೆ. (‘ತಂತ್ರಾಂಶಗಳೆಂದರೆ ‘ಗಣಕದ ಭಾಷೆ’ ಯಲ್ಲಿ ಗಣಕಕ್ಕೆ ನೀಡಿರುವ ಪೂರ್ವ ನಿರ್ದೇಶನಗಳು.) ಹೌದು, ಗಣಕಕ್ಕೆ ನಮ್ಮ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ! ಗಣಕಕ್ಕೆ ಅರ್ಥವಾಗುವ ಭಾಷೆ ಕೇವಲ ‘ದ್ವಿಮಾನ ಭಾಷೆ’ ಅಂದರೆ‘೧’‘೦’ ಮಾತ್ರ. ಗಣಕವು ಎಲ್ಲಾ ಮಾಹಿತಿಗಳನ್ನು ಇದೇ ಪದ್ಧತಿಯಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ.

ಬೇರೆ ಬೇರೆ ಭಾಷೆಯ ಮಾಹಿತಿಯನ್ನು ಬೇರೆ ಬೇರೆ ‘ಸಂಕೇತ’ (Code) ಗೆ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಳಕೆದಾರರು ಅದನ್ನು ಬಯಸಿದಾಗ ಮತ್ತೆ ಆಯಾ ಭಾಷೆಗೆ ಪರಿವರ್ತಿಸಿ ಗಣಕದ ಪರದೆಯ ಮೇಲೆ ಮೂಡಿಸುತ್ತದೆ.

ಮಾಹಿತಿಗಳನ್ನು ‘ಸಂಕೇತ’ ಭಾಷೆಗೆ ಪರಿವರ್ತಿಸಲು ಅನೇಕ ‘ಶಿಷ್ಟ’ (Standard) ಗಳಿವೆ. ಅವುಗಳಲ್ಲಿ ಮುಖ್ಯವಾದವೆಂದರೆ, ‘ANSI’ (American National Standard Institute) ಹಾಗು ‘ಯೂನಿಕೋಡ್’ (Unicode) (International Standard) ‘ಅಂತರ ರಾಷ್ಟ್ರೀಯ ಶಿಷ್ಟತೆ’

‘ANSI’ ಯನ್ನು ಆಂಗ್ಲ ಭಾಷೆಯನ್ನು ಗಣಕಕ್ಕೆ ಸೇರಿಸಲು ಸಿದ್ಧಪಡಿಸಲಾಯಿತಾದರೂ ಪ್ರಪಂಚದ ಬೇರೆ ಬೇರೆ ಭಾಷೆಗಳನ್ನು ಆರಂಭದಲ್ಲಿ ಇದರ ಮೂಲಕವೇ ಸಂಕೇತ ರೂಪಕ್ಕೆ ಪರಿವರ್ತಿಸಲಾಗುತ್ತಿತ್ತು. ಆದರೆ, ಆಂಗ್ಲ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಸಂಗ್ರಹಿಸುವ ಪದ್ಧತಿಯಲ್ಲಿ ಒಂದು ಶಿಷ್ಟತೆ ಇರಲಿಲ್ಲ. ಇದರಿಂದಾಗಿ ಅಂತರಜಾಲದಲ್ಲಿ ವಿವಿಧ ಭಾಷೆಗಳ ಪಠ್ಯವನ್ನು ತೋರಿಸುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ‘ಯುನಿಕೋಡ್’ ಎಂಬ ಅಂತರರಾಷ್ಟ್ರೀಯ ‘ಶಿಷ್ಟತೆ’ ಯನ್ನು ಜಾರಿಗೊಳಿಸಲಾಯಿತು. ಈ ಶಿಷ್ಟತೆಯನ್ನು ‘ಯುನಿಕೋಡ್ ಕನ್ಸೋರ್ಟಿಯಂ’ ಎನ್ನುವ ಸಂಘಟನೆಯು ನಿರ್ವಹಿಸುತ್ತದೆ. ಕಾಲ-ಕಾಲಕ್ಕೆ ಭಾಷೆಗಳ ವರ್ಣಮಾಲೆಗಳಲ್ಲಾಗುವ ಬದಲಾವಣೆಗಳಿಗನುಗುಣವಾಗಿ ಶಿಷ್ಟತೆಯನ್ನು ಬದಲಾಯಿಸುವ ಅಥವಾ ಈ ಶಿಷ್ಟತೆಗೆ ಸಂಬಂಧಪಟ್ಟ ಇತರ ಕೆಲಸಗಳನ್ನು ಈ ಸಂಘಟನೆಯು ನೋಡಿಕೊಳ್ಳುತ್ತದೆ. ಇದರಿಂದಾಗಿ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗಣಕದಲ್ಲಿ ಸೇರಿಸುವುದು ಸುಲಭಸಾಧ್ಯ. ಆದ್ದರಿಂದ ಯಾವುದೇ ಭಾಷೆಯನ್ನು ಅಂತರಜಾಲದಲ್ಲಿ ತೋರಿಸುವುದು ಸಾಧ್ಯವಾಗುತ್ತದೆ. ಅಲ್ಲದೇ ಈ ಏಕರೂಪ ಶಿಷ್ಟತೆಯು ವಿವಿಧ ಭಾಷೆಗಳಲ್ಲಿ ತಂತ್ರಾಂಶವನ್ನು ಸಿದ್ಧಪಡಿಸಲು ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿನ ಅನೇಕ ಮಾಹಿತಿಗಳು ಅಂತರಜಾಲದಲ್ಲಿ ಲಭ್ಯವಿವೆ; ಅಲ್ಲದೇ ಕನ್ನಡದಲ್ಲಿಯೂ ತಂತ್ರಾಂಶದ ಬೆಳವಣಿಗೆ ಸಾಧ್ಯವಾಗಿದೆ.

ದ್ರಾವಿಡ ಭಾಷೆಗಳಲ್ಲೇ ಕನ್ನಡ ೨ನೆ ಅತ್ಯಂತ ಪ್ರಾಚೀನ ಭಾಷೆ. ‘ಯುನೆಸ್ಕೋ’ ಸಂಘಟನೆಯ ಪ್ರಕಾರ ಕನ್ನಡ ೨೮ ನೆ ಅತೀ ಹೆಚ್ಚು ಮಾತನಾಡಲ್ಪಡುವ ಭಾಷೆ. ಭಾರತದಲ್ಲಿ ಸಾಹಿತ್ಯದಲ್ಲೇ ಅತ್ಯಂತ ಶ್ರೇಷ್ಟವಾದ ‘ಜ್ಞಾನಪೀಠ’ ಪ್ರಶಸ್ತಿಯು ಅತೀ ಹೆಚ್ಚು ಅಂದರೆ ೮ ಬಾರಿ ಕನ್ನಡ ಭಾಷೆಗೆ ಲಭಿಸಿದೆ. ಹೀಗಿದ್ದರೂ ಮಾಹಿತಿತಂತ್ರಜ್ಞಾನದಲ್ಲಿ ನಮ್ಮ ಕನ್ನಡ ಭಾಷೆ ಕೊಂಚ ಹಿಂದೆಬಿದ್ದಿರುವುದು ವಿಪರ್ಯಾಸ. ಹೀಗಿದ್ದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯು ಅಪಾರ ಸಾಧನೆ ಮಾಡಿರುವುದು ಸಂತಸದ ಸಂಗತಿ. ಕನ್ನಡವನ್ನು ಗಣಕದಲ್ಲಿ ಬೆರಳಚ್ಚು ಮಾಡಲು ಅನೇಕ ತಂತ್ರಾಂಶಗಳು ಲಭ್ಯವಿವೆ. ಕನ್ನಡ ಭಾಷೆಯ ಅಕ್ಷರಗಳನ್ನು ಗಣಕದ ಪರದೆಯ ಮೇಲೆ ಮೂಡಿಸಲು ವಿವಿಧ ಬಗೆಯ ‘ಫಾಂಟ್’ (Font) ಗಳು ಲಭ್ಯವಿವೆ. ಹೀಗಾಗಿ ಕನ್ನಡ ಭಾಷೆಯನ್ನು ಗಣಕದಲ್ಲಿ ಬೆರಳಚ್ಚು ಮಾಡುವುದು, ಮುದ್ರಿಸುವುದು ಅಥವಾ ಅಂತರಜಾಲಕ್ಕೆ ಸೇರಿಸುವುದು ತುಂಬಾ ಸುಲಭವಾಗಿದೆ. ಇದರಿಂದಾಗಿ ಕನ್ನಡದಲ್ಲಿ ಮುದ್ರಕರು ಹಾಗು ಮುದ್ರಣ ಮಾಧ್ಯಮಗಳು ಹೆಚ್ಚು ಹೆಚ್ಚು ಬೆಳೆಯಲು ಸಾಧ್ಯವಾಗಿದೆ. ಸುಲಭವಾಗಿ ಅಂತರಜಾಲದಲ್ಲಿ ಕನ್ನಡವನ್ನು ಸೇರಿಸಲು ಸಾಧ್ಯವಾಗಿರುವುದರಿಂದ ಅನೇಕ ಕನ್ನಡ ಬ್ಲಾಗುಗಳು ಹಾಗು ವೆಬ್‌ಸೈಟುಗಳು ಹುಟ್ಟಿಕೊಂಡು ಹೆಚ್ಚು ಹೆಚ್ಚು ಮಾಹಿತಿಗಳು ಹಾಗು ಮನೋರಂಜನೆಯನ್ನು ಕನ್ನಡಿಗರಿಗೆ ನೀಡುತ್ತಿವೆ. ಅನೇಕ ಅಂತರಜಾಲ ನಿಘಂಟುಗಳು ಹಾಗೂ ಅಂತರಜಾಲ ‘ಜ್ಞಾನಕೋಷಗಳು’ ಕನ್ನಡ ಭಾಷೆಯ ಗರಿಮೆಗೆ ಮುಖುಟವಿಟ್ಟಂತಾಗಿದೆ. ಬೇರೆ-ಬೇರೆ ಭಾಷೆಗಳಿಂದ ಕನ್ನಡ ಭಾಷೆಗೆ ಅನುವಾದಿಸುವ ಸೌಲಭ್ಯವೂ ಅಂತರಜಾಲದಲ್ಲಿ ರೂಪುಗೊಳ್ಳುತ್ತಿದೆ.
ಇವುಗಳಲ್ಲಿ ಕೆಲವು ಉಪಯುಕ್ತ ಕನ್ನಡ ಬ್ಲಾಗು/ವೆಬ್ಸೈಟುಗಳನ್ನು ನಿಮ್ಮ ಅನುಕೂಲಕ್ಕಾಗಿ ಇಲ್ಲಿ ಕೊಡಲಾಗಿದೆ.

ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ’ಅಂತರ ಜಾಲ ಜ್ಞಾನಕೋಷ’ "ಕನಜ"
http://kanaja.in/
’ಕಣಜ’ ದಲ್ಲಿ ಹಲವು ಕನ್ನಡ ನಿಘಂಟು/ಪದಕೋಷಗಳು ಬಳಕೆಗೆ ಲಭ್ಯ. ’ಯುನಿಕೋಡ್’ ಕನ್ನಡ ಪಠ್ಯವನ್ನು ಓದಿ ಹೇಳುವ (ಧ್ವನಿ ರೂಪಕ್ಕೆ ಬದಲಾಯಿಸುವ) ಒಂದು ಮುಕ್ತ ತಂತ್ರಾಂಶವೂ ಲಭ್ಯವಿದೆ.

ಕನ್ನಡ ವಿಕಿಪೀಡಿಯ
http://kn.wikipedia.org/

ಗೂಗಲ್ ಅನುವಾದ

http://translate.google.com/

ಕೆಲವು ಇತರೇ ಕನ್ನಡ ಬ್ಲಾಗು/ಸೈಟುಗಳು:
http://kannada.oneindia.in/
http://www.kendasampige.com/
http://mitramaadhyama.co.in/
http://pavanaja.com/
http://kannada.webdunia.com/
http://vishvakannada.com/

ಗಮನಿಸಿ: ಈ ಪಟ್ಟಿಯಲ್ಲಿ ಕೆಲವೇ ಕೆಲವು ಜಾಲತಾಣಗಳ ವಿಳಾಸ ಲಭ್ಯ. ಇನ್ನೂ ಹೆಚ್ಚಿನ ವಿಳಾಸಕ್ಕಾಗಿ, ಕಣಜದಲ್ಲಿನ ’ಕನ್ನಡ ಬ್ಲಾಗ್ ಸೂಚಿ’ ಗೆ ಬೇಟಿ ನೀದಿ.

ಒಟ್ಟಿನಲ್ಲಿ ಹೇಳುವುದಾದರೆ ಮಾಹಿತಿತಂತ್ರಜ್ಞಾನದಲ್ಲಿ ಕನ್ನಡ ಭಾಷೆಯೂ ಸೇರಿಕೊಂಡಿರುವುದರಿಂದ, ಕನ್ನಡ ಭಾಷೆಗೆ ಹಾಗೂ ಭಾಷೆಯ ಬೆಳವಣಿಗೆಗೆ ತುಂಬಾ ಅನುಕೂಲವಾಗಿರುವುದಂತು ಸತ್ಯ. ಬರೀ ಗಣಕದಲ್ಲಿ ಮಾತ್ರವಲ್ಲದೇ, ಮೊಬೈಲ್ ಫೋನುಗಳು, ’ಟ್ಯಾಬ್ಲೆಟ್’ ಪಿ.ಸಿ.ಗಳಲ್ಲಿಯೂ ನಮ್ಮ ಕನ್ನಡ ಭಾಷೆ ಲಭ್ಯ ಎನ್ನುವುದು ಕನ್ನಡಿಗರಾದ ನಮಗೆ ಅತ್ಯಂತ ಸಂತಸ ಹಾಗು ಹೆಮ್ಮೆಯ ವಿಷಯ.

"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ"ಜೈ ಕನ್ನಡಾಂಬೆ!

2 comments:

  1. ತಮ್ಮ ಬ್ಲಾಗ್ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಧನ್ಯವಾದಗಳು

    ReplyDelete
  2. ತಮ್ಮ ಬ್ಲಾಗ್ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಧನ್ಯವಾದಗಳು

    ReplyDelete