Monday, June 20, 2011

ಅಂಧರ ಬಾಳಿಗೆ ಬೆಳಕಾಗಬಲ್ಲ ‘ಸ್ಟೆಮ್ ಸೆಲ್‘ ತೆರಪಿ

Dear all, Here I am posting a reproduced article bassed on an article in a popular site. This article explains about the use of stem cells for treating various retinal diseases.

----------------------------------------------
ಸ್ಟೆಮ್ ಸೆಲ್ (Stem Cell) ಅನ್ನು ಬಳಸಿ ವಂಶವಾಹಿಗಳಿಂದ ಅನುವಂಶೀಯವಾಗಿ ಬರುವ ಒಂದು ಬಗೆಯ ಅಂಧತ್ವವನ್ನು ಸರಿಪಡಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಈ ಸಂಶೋಧನೆಯ್ಯು ಅಕ್ಷಿಪಟಲ (Retina) ಸಂಬಂದಿ ಕಾಯಿಲೆಗಳಿಗೆ ಮುಂದಿನ ದಿನಗಳಲ್ಲಿ ಒಂದು ಶಾಶ್ವತ ಚಿಕಿತ್ಸೆಯನ್ನು ನೀಡುವ ಭರವಸೆಯನ್ನು ಮೂಡಿಸಿದೆ. ಮ್ಯಾಕ್ಯುಲಾರ್ ಡಿಜನರೇಶನ್ (Macular degeneration), ರೆಟಿನೈಟಿಸ್ ಪಿಗ್‌ಮೆಂಟೋಸ (Retinitis pigmentosa) ಇಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಬಲಿಯಾಗಿ ಕುರುಡರಾಗುತ್ತಿದ್ದಾರೆ. ಇಂಥವರ ಜೀವನದಲ್ಲಿ ಮತ್ತೆ ಬೆಳಕು ಮೂಡುವ ಆಶಯವನ್ನು ಈ ಸಂಶೋಧನೆ ಮೂಡಿಸಿದೆ.

ಸ್ಟೆಮ್‌ಸೆಲ್ ಸಂಶೋಧನೆಗಳ ಕುರಿತಾಗಿರುವ ಒಂದು ಪ್ರತಿಷ್ಠಿತ ಆನ್‌ಲೈನ್ ಜರ್‌ನಲ್‌ನಲ್ಲಿ ಈ ಕುರಿತ ಸಂಶೋಧನೆಯ ವಿವರಗಳು ಜೂನ್ ೧೫ ರಂದು ಪ್ರಕಟಗೊಂಡಿವೆ. ಈ ಸಂಶೋಧನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ (induced pluripotent stem) (iPS) ಸೆಲ್‌ಗಳನ್ನು ಬಳಸಿ ಒಂದು ವಿರಳ ಅನುವಂಶೀಯ ಖಾಯಿಲೆಯಾದ ಜೆಯ್‌ರೇಟ್ ಆಟ್ರಫಿ (gyrate atrophy) ಅನ್ನು ಗುಣಪಡಿಸಲಾಗಿದೆ. ಈ ಕಾಯಿಲೆಯು ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ (retinal pigment epithelium) (RPE) ಸೆಲ್‌ಗಳನ್ನು ನಾಶ ಪಡಿಸಿ ಅಂಧತ್ವವನ್ನುಂಟು ಮಾಡುತ್ತದೆ. ಇವುಗಳು ರೆಟಿನಾದಲ್ಲಿನ ‘ಫೋಟೋ ರಿಸೆಪ್ಟಾರ್‘ ಸೆಲ್‌ಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಈ ಫೋಟೋ ರಿಸೆಪ್ಟಾರ್ ಸೆಲ್‌ಗಳು ರೆಟಿನಾದ ಮೇಲೆ ಬಿದ್ದ ಬೆಳಕನ್ನು ಸಂಕೇತ ರೂಪಕ್ಕೆ ಪರಿವರ್ತಿಸಿ ಮೆದುಳಿಗೆ ಕಳಿಸುವಲ್ಲಿ ನೆರವಾಗುತ್ತವೆ. ಈ ಸಂಕೇತಗಳನ್ನು ಮೆದುಳು ಗ್ರಹಿಸಿ ಅವುಗಳನ್ನು ಅರ್ಥೈಸಿಕೊಳ್ಳುತ್ತದೆ. ಆದರೆ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳ ತೊಂದರೆಯಿಂದಾಗಿ ಫೋಟೋ ರಿಸೆಪ್ಟಾರ್ ಸೆಲ್‌ಗಳು ಸರಿಯಾಗಿ ಕೆಲಸ ಮಾಡದೇ ಕುರುಡತ್ವ ಉಂಟಾಗುತ್ತದೆ. ಹಾಳಾದ ‘ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳನ್ನು ಪುನರ್‌ನಿರ್ಮಾಣ ಮಾಡುವುದರಿಂದ ಈ ಕಾಯಿಲೆಯಿಂದಾಗಿ ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿಸಬಹುದು.

"ನಾವು ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ ಸೆಲ್‌ಗಳನ್ನು ತಯಾರಿಸಿ, ಈ ಕಾಯಿಲೆಗೆ ಕಾರಣವಾದ ಒಂದು ಬಗೆಯ ವಂಶವಾಹಿ ತೊಂದರೆಯನ್ನು ಸರಿಪಡಿಸಿ, ಈ ಇಂಡ್ಯೂಸ್‌ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳು ರೆಟಿನಲ್ ಪಿಗ್‌ಮೆಂಟ್ ಎಪಿಥೀಲಿಯಮ್‘ ಸೆಲ್‌ಗಳಾಗಿ ಬೆಳೆಯುವಂತೆ ಮಾಡಿದಾಗ ಈ ಸೆಲ್‌ಗಳು ಸ್ವಾಬಾವಿಕವಾಗಿ ಕಾರ್ಯನಿರ್ವಹಿಸಿದವು. ಈ ಫಲಿತಾಂಶವು ತುಂಬಾ ಉತ್ತೇಜನಕಾರಿಯಾದುದು ಯಾಕೆಂದರೆ ಸರಿಯಾಗಿಲ್ಲದ ಒಂದು ಸಂಕೀರ್ಣ ವ್ಯವಸ್ಥೆಯನ್ನೂ ಸಹ ನಾವು ಸರಿಪಡಿಸಬಹುದು, ಅಲ್ಲದೇ ಭವಿಷ್ಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ನಿಶ್ಪ್ರಯೋಜಕವಾಗಿರುವ ರೆಟಿನಾದ ಸೆಲ್‌ಗಳನ್ನೂ ಈ ಚಿಕಿತ್ಸೆಯಿಂದ ಸರಿಪಡಿಸಬಹುದು" ಎಂದು ಅಧ್ಯಯನದ ನೇತೃತ್ವ ವಹಿಸಿರುವ ಕೋಷ ಜೀವಶಾಸ್ತ್ರಜ್ಞ ಹಾಗು ಇಂಡ್ಯಾನ ವಿಶ್ವವಿದ್ಯಾನಿಲಯದ ‘ಸ್ಕೂಲ್ ಆಫ್ ಸೈನ್ಸ್‘ ನ ಜೀವಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ|| ಜೇಸನ್ ಮೇಯರ್ ತಿಳಿಸಿದರು.

ಮ್ಯಾಕ್ಯುಲಾರ್ ಡಿಜನರೇಶನ್ ಒಂದು ಸಾಮಾನ್ಯ ಕಣ್ಣಿನ ಕಾಯಿಲೆಯಾಗಿದ್ದು ವಿಶ್ವದಲ್ಲಿನ ಸುಮಾರು ೨೫-೩೦ ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸುಮಾರು ೧.೫ ಮಿಲಿಯನ್ ಜನರು ರೆಟಿನೈಟಿಸ್ ಪಿಗ್‌ಮೆಂಟೋಸ ರೋಗದಿಂದ ಬಳಲುತ್ತಿದ್ದಾರೆ.

ಈ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್‘ ಸೆಲ್‌ಗಳನ್ನು ಅದೇ ರೋಗಿಗಳಿಂದ ಪಡೆದುಕೊಳ್ಳುವುದರಿಂದಾಗಿ ಮುಂದೆ ಯಾವುದೇ ‘ಟ್ರಾನ್ಸ್‌ಪ್ಲಾಂಟ್ ರಿಜಕ್ಷನ್‘ ಅಂತಹ ಸಮಸ್ಯೆಗಳು ತಲೆದೋರುವುದಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಇಂತಹ ಅವಿಷ್ಕಾರಗಳು ಮನುಕುಲದ ಅನೇಕ ಸಮಸ್ಯೆಗಳನ್ನು ಬಹುಮಟ್ಟಿಗೆ ನಿವಾರಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಸಂಶೋಧನೆಗಳು ನಡೆದು ಬೆಳಕನ್ನೇ ಕಾಣದವರ ಬಾಳನ್ನು ಬೆಳಗಲಿ ಎಂದು ಆಶಿಸೋಣ ಅಲ್ಲವೇ?

ಕೃಪೆ: ಸೈನ್ಸ್‌ಡೇಲಿ

No comments:

Post a Comment