Wednesday, May 9, 2012

ಸೇದುವ ಸುಖ.......!


ಮೊನ್ನೆ ನಾನು ನನ್ನ ಪದವಿ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ನನ್ನ cousin ಮನೆಯಲ್ಲಿ ಕುಳಿತು ಹರಟುತ್ತಿದ್ದಾಗ ಅವನು ’ನನ್ನ್ ಸೇದದ್ ಎಲ್ಲ್ ಹೋತಾ?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ನನಗೆ ಕೊಂಚ ಸೋಜಿಗವೆನಿಸಿತು. ಏಕೆಂದರೆ ಅವನು ನನಗಿಂತಾ ಸುಮಾರು ೫-೬ ವರ್ಷ ಸಣ್ಣವನು. ಅಲ್ಲದೇ ನಾನು ನನ್ನ ಜೀವನದಲ್ಲಿ ಸೇದುವುದಕ್ಕಾಗಿ ಹಂಬಲಿಸಿದವನಲ್ಲ, ಹಪಹಪಿಸಿದವನೂ ಅಲ್ಲ. ನನಗಿಂತಾ ಸಣ್ಣವನು ನನ್ನ ಮುಂದೆಯೇ ಸೇದುವ ಇಚ್ಚೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದಾಗ ನನಗೆ ತಡೆಯಲು ಸಾಧ್ಯವಾಗಲಿಲ್ಲ. ಕೊಂಚ ಹೊತ್ತು ಅವನು ಅವನ ಸೇದುವ ಕಾರ್ಯದಲ್ಲಿ ಮಗ್ನನಾದ. ನಾನು ನನ್ನ ಪಾಡಿಗೆ ಯೋಚಿಸುತ್ತಾ ಕುಳಿತೆ. ತಟಕ್ಕನೆ ನನಗೆ ನನ್ನ ಹೈಸ್ಕೂಲ್ ಹೆಡ್‌ಮೇಷ್ಟ್ರು ’ಚಟವಿಲ್ಲದವನು ಚಟ್ಟಕ್ಕೆ ಸಮಾನ’ ಎಂದು ಹೇಳಿದ್ದು ನೆನಪಾಯಿತು. ನಾನು ಸೇದಿರದಿದ್ದರೆ ಯಾರೂ ಸೇದಬಾರದೆಂಬುದು ನನ್ನ ಹುಚ್ಚು ಕಲ್ಪನೆಯಲ್ಲವೇ? ಆದರೂ ನನಗಿಂತಾ ಸಣ್ಣವನು ಸೇದುವುದೆಂದರೇನು? ಅದನ್ನು ನಾನು ಅರಗಿಸಿಕೊಳ್ಳುವುದು ಹೇಗೆ? ನಾನು ಏಕೆ ಸೇದಲಿಲ್ಲ? ಓಹ್, ಅದು ನನ್ನದೇ ತಪ್ಪು. ನಾನೂ ಸೇದಬೇಕಾಗಿತ್ತು. ಅವನ ಸೇದುವ ಕಾರ್ಯ ಮುಗಿದ ಮೇಲೆ ನನ್ನ ಕುತೂಹಲವನ್ನು ತಡೆಯದೇ ’ಯಂತ ಅದು ಸೇದದೂ?’ ಎಂದೆ. ಅವನು ಮರು ಮಾತನಾಡದೆ ಆ ಸೇದುವ instrument ಅನ್ನು ನನ್ನ ಕೈಗೆ ಕೊಟ್ಟ! ಆಹಾ, ಆಹಾ, ಆಹಾ, ಯಂತಾ ಸುಖ! ಅದನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಬಿಡಿ! ಆದರೆ ಅದನ್ನು ಸೇದುತ್ತಿದ್ದಂತೆ ನನಗೆ ನಾನೂ ದಿನಾ ರಾತ್ರಿ ಸೇದುತ್ತಿರುವುದು ನೆನಪಾಯಿತು. ನಾನು ಸುಮಾರು ೩-೪ ವರ್ಷಗಳಿಂದ ನಿರಂತರವಾಗಿ ಸೇದಿಕೊಂಡು ಬರುತ್ತಿರುವುದು ಅರಿವಿಗೆ ಬಂದು, ನನ್ನದು ಯಂತಾ ಹುಚ್ಚು ಮನಸ್ಸು, ತುಂಬಾ ಯೋಚಿಸಿಬಿಟ್ಟೆ ಎಂದೆನಿಸಿತು. ಆದರೂ ಸೇದುವ ಸುಖ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಟ್ಟಿತ್ತು! ಸಾಕು, ಎಷ್ಟು ಸೇದುವುದು? ಎನಿಸಿ ಸೇದುವ instrument ಅನ್ನು ಅವನ ಕೈಗೆ ವಾಪಾಸು ಕೊಟ್ಟೆ. ’ಭಾರಿ ಖುಷೀ ಆತೋ ಮರಾಯಾ!’ ಎಂದೆ. ’ತಂಡೀ-ಗಿಂಡೀಯಲ್ಲಾ ಚೊಲೋ ಹೊಕ್ತೋ ಮರಯಾ’ ಎಂದೆ. ಅವನು ’ಹೌದಾ, ಇದು ರಾಶೀ ಹಳೆ ವಿಕ್ಸ್ inhaler ಮರಾಯ’ ಎಂದ. ಅದಕ್ಕೆ ನಾನು ’ನಾನೂ ಒಂದು inhaler ನ ದಿನಾ ರಾತ್ರೆ ಸೇದ್ತಿ’ ಎಂದೆ. ಆರೋಗ್ಯದಲ್ಲಿ ಏರು-ಪೇರು ಉಂಟಾದಲ್ಲಿ, ಗಂಟಲು ನೋವು ಬಂದಲ್ಲಿ, ಮೂಗು ಸೋರಲು ಶುರುವಾದಲ್ಲಿ, ದಯವಿಟ್ಟು ನೀವೂ ಸೇದಿ! ಸೇದುವಾಗ ನನ್ನ ಈ ಬರಹವನ್ನು ದಯವಿಟ್ಟು ಒಮ್ಮೆ ನೆನಪಿಸಿಕೊಳ್ಳಿ! ಸೇದಿ-ಸೇದಿಸಿ, ಶೀತ ಓಡಿಸಿ!