Dear all, in this post I am going write something about immagination and perception. Although this post does not cite any scientific reports, I hope this not unscientific. This artical is written on the basis of some questions raised by the people and some my own experiences. Your comments/responces are highly appreciated with regards to this article. Your comments/responces would definitly will expand my little knowledge! so please do respond me :-)
This article is fully in Kannada.
ಬಹಳ ದಿನಗಳ ನಂತರ ನನಗೆ ತೋಚಿದ ಒಂದು ವಿಚಾರದಬಗ್ಗೆ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದಕ್ಕೆ ನಿಖರವಾದ ವೈಜ್ಞಾನಿಕ ಆದಾರಗಳು ನನ್ನಲ್ಲಿ ಇಲ್ಲದೇ ಹೋದರೂ, ನನಗೆ ಅನೇಕರು ಕೇಳಿದ ಪ್ರಶ್ನೆಗಳು ಹಾಗು ನನ್ನ ಅನುಭವ/ಯೋಚನೆಗಳ ಆದಾರದ ಮೇಲೆ ಇದನ್ನು ಬರೆಯುತ್ತಿದ್ದೇನೆ. ನಿಮ್ಮ ವಿಮರ್ಶೆಗಳಿಗೆ ಮುಕ್ತ ಸ್ವಾಗತ. ನಿಮ್ಮ ಪ್ರತಿಕ್ರಿಯೆಗಳು ನನ್ನ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಲಿದೆ ಎಂಬುದು ನನ್ನ ನಂಬಿಕೆ. ಇರಲಿ, ಇನ್ನು ನೇರವಾಗಿ ವಿಷಯಕ್ಕೆ ಬರೋಣ.
ಪ್ರತಿಯೊಂದು ಜೀವಿಗೂ ಕಲ್ಪಿಸಿಕೊಳ್ಳುವ, ಭಾವಿಸುವ ಹಾಗು ಯೋಚಿಸುವ ಶಕ್ತಿ ಸಹಜವಾಗಿಯೇ ಬಂದಿದೆ. ಈ ಶಕ್ತಿ ಬೆಳೆಯಲು ಆಯಾಯ ಜೀವಿಯ ಸುತ್ತಮುತ್ತಲಿನ ಪರಿಸರ, ನಡೆಯುವ ವಿದ್ಯಮಾನಗಳು, ಹಾಗು ಕೆಲವು ಜೈವಿಕ ಪ್ರಕ್ರಿಯೆಗಳು ಕಾರಣವಾಗುತ್ತವೆ. ತನ್ನ ಸುತ್ತಲಿನ ಪರಿಸರದ ಬಗೆಗೆ ಆ ಜೀವಿಯ ಇಂದ್ರೀಯಗಳು ಮಾಹಿತಿ ನೀಡುತ್ತವೆ. ಇನ್ನು ಜೈವಿಕ ಪ್ರಕ್ರಿಯೆಗಳಿಗೆ ಸಂಬಂಧಪಟ್ಟ ಅಂಶಗಳನ್ನು ವಂಶವಾಹಿಗಳು ಅಥವಾ ಜೀನ್ಗಳು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತವೆ.
ಈ ಮೇಲೆ ಹೇಳಿದ ವಿಚಾರಗಳು ಜಗತ್ತಿನ ಹೆಚ್ಚೂ ಕಡಿಮೆ ಎಲ್ಲಾ ಜೀವಿಗಳಿಗೂ ಅನ್ವಯವಾಗುತ್ತದೆ. ಆದರೆ ಜೀವ ವೈವಿದ್ಯದ ಒಂದು ಭಾಗವಾಗಿರುವ ಸಸ್ಯಗಳ ಬಗೆಗೆ ಈ ಕುರಿತು ಹೇಳುವುದು ಕಷ್ಟ, ಅಥವಾ ನನಗೆ ಆ ಬಗ್ಗೆ ಮಾಹಿತಿ ಕೊಂಚ ಕಡಿಮೆ. ಕೆಲವರು ಸಸ್ಯಗಳಿಗೂ ಭಾವನೆ-ಯೋಚನೆ ಇದೆ ಎಂದು ಹೇಳಿದರೂ ಮತ್ತೆ ಕೆಲವರು ಅವಕ್ಕೆ ಭಾವನೆ-ಯೋಚನೆಗಳಿದ್ದರೂ ಪ್ರತಿಕ್ರಿಯೆಯನ್ನು ಅವು ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಅದೆಲ್ಲಾ ಏನೇ ಇರಲಿ ನಾನು ಇಲ್ಲಿ ಹೇಳಹೊರಟಿರುವುದು ಮನುಷ್ಯನ ಭಾವನೆಗಳು, ಕಲ್ಪನೆಗಳು, ಹಾಗು ಯೋಚನೆಗಳಬಗ್ಗೆ ಮಾತ್ರ.
ನಾನು ಮೇಲೆ ಹೇಳಿದಂತೆ ನಮ್ಮ ಇಂದ್ರೀಯಗಳು ನಮ್ಮ ಸುತ್ತಲಿನ ಪರಿಸರದ ಬಗೆಗೆ ಮಾಹಿತಿಯನ್ನು ನಮಗೆ ನೀಡುತ್ತವೆ. ಇದು ನಮ್ಮ ಬುದ್ಧಿಶಕ್ತಿಯನ್ನು ಬೆಳೆಸಿ ನಮ್ಮ ಕಲ್ಪನಾಶಕ್ತಿಯನ್ನು ಬೆಳೆಸುತ್ತದೆ. ನಮಗೆ ನಾವು ನೋಡದ ಅಥವಾ ಕೇಳದ ಒಂದು ವಸ್ತುವಿನ ಬಗ್ಗೆ ಕಲ್ಪಿಸಿಕೊಳ್ಳುವುದು ಎಂದೆಂದಿಗೂ ಸಾಧ್ಯವೇ ಇಲ್ಲ. ಇದನ್ನು ನೀವು ಒಪ್ಪದಿದ್ದರೆ, ನೀವೇ ಬೇಕಾದರೆ ಪರೀಕ್ಷಿಸಿ ನೋಡಬಹುದು. ನಾವು ದೇವರಬಗ್ಗೆ ಕೇಳಿದ್ದೇವೆ. ಅವನನ್ನು ಮನುಷ್ಯ ರೂಪದಲ್ಲಿ ಪೂಜಿಸುತ್ತೇವೆ. ಅದು ದೇವರ ಬಗೆಗೆ ನಮ್ಮ ಒಂದು ಕಲ್ಪನೆ. ಆದರೆ ದೇವರ ಮೂರ್ಥಿ ಪೂಜೆಯನ್ನು ಒಪ್ಪದ ಜನ ದೇವರ ಈ ರೂಪವನ್ನು ಒಪ್ಪುವುದಿಲ್ಲ. ಹಾಗಾದರೆ ದೇವರ ರೂಪ ಹೇಗಿರಬಹುದು? ಕೆಲವರು ದೇವರು ಒಂದು ಶಕ್ತಿ ಅವನು ನಿರಾಕಾರ ಎಂದರೆ, ಕೆಲವರು ದೇವರನ್ನು ಬೆಳಕಿನಂತೇ, ನೀರಿನಂತೇ, ಗಾಳಿಯಂತೆ, ಹೀಗೆ ಅವರವರಿಗೆ ತಿಳಿದಂತೆ ದೇವರನ್ನು ಕಲ್ಪಿಸಿಕೊಳ್ಳುತ್ತಾರೆ, ಆದರೆ ದೇವರ ನಿಜರೂಪವನ್ನು ಬಹುಶಃ ಯಾರಿಂದಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಯಾರೂ ದೇವರನ್ನು ನೋಡಿಲ್ಲ! ನಾವು ಕಲ್ಪಿಸಿಕೊಳ್ಳುವ ದೇವರ ರೂಪವು ನಾವು ಕಣ್ಣಿನಿಂದ ನೋಡಿರುವ ಯಾವುದಾದರೂ ಒಂದಕ್ಕೆ ತಳುಕುಹಾಕಿಕೊಂಡಿರುತ್ತದೆ ಅಲ್ಲವೇ? ನೀವು ಬೇಕಾದರೆ ನೀವು ನೋಡಿರದ ಒಂದು ವಸ್ತುವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ ನೋಡಿ, ನೀವು ನೋಡಿರುವ ಯಾವುದಾದರೂ ಒಂದು ವಸ್ತುವಿಗೆ ಅದನ್ನು ಹೋಲಿಸಿ ಕಲ್ಪಿಸಿಕೊಳ್ಳಲು ಮಾತ್ರ ಸಾಧ್ಯ! ಇನ್ನು ಪಂಚೇಂದ್ರೀಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಹಾಗು ಚರ್ಮಗಳಲ್ಲಿ ಯಾವುದಾದರೂ ಒಂದು ಇಂದ್ರೀಯ ಮನುಷ್ಯನ ಹುಟ್ಟಿನಿಂದಲೇ ಕೆಲಸ ಮಾಡದಿದ್ದರೆ, ಆ ಮನುಷ್ಯನಿಗೆ ಆ ಇಂದ್ರೀಯದಿಂದ ಒಳಬರುವ ಮಾಹಿತಿಯ ಅರಿವೇ ಇರುವುದಿಲ್ಲ! ಉದಾಹರಣೆಗೆ ಹುಟ್ಟಿನಿಂದಲೇ ಬೆಳಕನ್ನು ಕಾಣದ ಒಬ್ಬ ಅಂಧನಿಗೆ ಬೆಳಕಿನ್ ಅರಿವೇ ಇರುವುದಿಲ್ಲ. ಅಂತೆಯೇ ಅದನ್ನು ಕಲ್ಪಿಸಿಕೊಳ್ಳಲೂ ಅವನಿಂದ ಸಾಧ್ಯವೇ ಇಲ್ಲ! ಅದೇ ರೀತಿ ಹುಟ್ಟಿನಿಂದಲೇ ಶಬ್ದವನ್ನೇ ಕೇಳದ ಒಬ್ಬ ಶ್ರವಣ ದೋಶವುಳ್ಳ ವ್ಯಕ್ತಿಗೆ ಶಬ್ದವೆಂದರೇನೆಂದೇ ತಿಳಿದಿರುವುದಿಲ್ಲವಾದ್ದರಿಂದ ಅವನಿಗೆ ಶಬ್ದದ ಕಲ್ಪನೆ ಸಾಧ್ಯವೇ ಇಲ್ಲ! ಇನ್ನೊಂದು ವಿಷಯವೆಂದರೆ ಹುಟ್ಟಿನಿಂದ ಅಂಧರಾದ ವ್ಯಕ್ತಿಗಳು ಕನಸಿನಲ್ಲೂ ಯಾವುದೇ ದೃಷ್ಯವನ್ನು ಕಾಣಲಾರರು! ಹಾಗೆಯೇ ಹುಟ್ಟಿನಿಂದಲೇ ಶ್ರವಣ ದೋಶವುಳ್ಳವರು ತಮ್ಮ ಕನಸಿನಲ್ಲಿ ಯಾವುದೇ ಶಬ್ದವನ್ನು ಕೇಳಲಾರರು! ಇದನ್ನೆಲ್ಲಾ ಗಮನಿಸಿದರೆ, ನಮ್ಮ ಕಲ್ಪನಾಶಕ್ತಿಯು ಇಂದ್ರೀಯಗಳಿಂದ ಒಳಬರುವ ಮಾಹಿತಿಗಳ ಮೇಲೆಯೇ ಅವಲಂಬಿತವಾಗಿದೆ ಎಂಬುದು ಸ್ಫಷ್ಟ. ಆದರೆ ಕೆಲವು ಬಯಕೆಗಳನ್ನು ಹೊಂದಿರುವ ಕಲ್ಪನೆಗಳು,ಭಾವನೆಗಳು, ಯೋಚನೆಗಳು ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಉಂಟಾಗುತ್ತವೆ. ಉದಾಹರಣೆಗೆ ಲೈಂಗಿಕತೆಯ ಕುರಿತ ಯೋಚನೆಗಳು ಅಥವಾ ಕಲ್ಪನೆಗಳು ಇಂದ್ರೀಯಗಳಿಂದ ಬರುವ ಮಾಹಿತಿಯನ್ನು ಅವಲಂಬಿಸಿರುವುದಿಲ್ಲ. ಉದಾಹರಣೆಗೆ ಒಬ್ಬ ಬುದ್ಧಿಮಾಂದ್ಯ ಮನುಷ್ಯನಿಗೂ ಯಾವುದೇ ಮಾಹಿತಿ ಇಲ್ಲದೇ ಇದ್ದಕ್ಕಿದ್ದಂತೆ ಲೈಂಗಿಕ ಬಯಕೆಗಳು ಹುಟ್ಟಿಕೊಳ್ಳಬಹುದು. ಹೀಗೆ ಕೆಲವು ನೈಸರ್ಗಿಕ ವಿಚಾರಗಳನ್ನು ಬಿಟ್ಟರೆ, ಉಳಿದ ಎಲ್ಲಾ ಕಲ್ಪನೆಗಳು ನಾವು ನೋಡಿದ ಅಥವಾ ಕೇಳಿದ ವಸ್ತು ಅಥವಾ ವಿಷಯಗಳ ಮೇಲೆ ಅವಲಂಬಿತವಾಗಿರುತ್ತವೆ.
ಈ ಮೇಲ್ಕಂಡ ಮಾಹಿತಿಗಳನ್ನು ನನ್ನ ಸ್ವಂತ ಅನುಭವ ಹಾಗು ವಯ್ಯಕ್ತಿಕ ಅಭಿಪ್ರಾಯಗಳ ಮೇಲಷ್ಟೇ ನೀಡಿದ್ದೇನೆ. ನಾನು ಒಬ್ಬ ಅಂಧನಾಗಿದ್ದುಕೊಂಡು ಜೊತೆಗೆ ಬೇರೆ ಬೇರೆ ರೀತಿಯ ಅಂಗವೈಕಲ್ಯ ಹೊಂದಿದವರ ಜೊತೆಗಿನ ನನ್ನ ಸಹವಾಸ, ಮತ್ತೆ ಕೆಲವರು ನನಗೆ ಕೇಳಿದ ವಿವಿಧ ಪ್ರಶ್ನೆಗಳು ಇದನ್ನು ಬರೆಯಲು ಸ್ಫೂರ್ತಿ. ಇದು ಯಾವುದೇ ಮಾನಸಿಕ ಸಂಶೋಧನೆಗಳ ಮೇಲೆ ಆಧಾರಿತವಾಗಿರದೇ ಕೇವಲ ವಯ್ಯಕ್ತಿಕ ಅನುಭವಗಳ ಮೇಲೆ ಆಧಾರಿತವಾಗಿದೆ. ಈ ಲೇಖನ ಸಂಪೂರ್ಣವಾಗಿ ವೈಜ್ಞಾನಿಕವಾದ ಪ್ರಶ್ನೋತ್ತರಗಳಿಂದ ಸಂಯೋಜನೆ ಮಾಡಿಲ್ಲವಾದ್ದರಿಂದ ಇದನ್ನು ಒಪ್ಪುವುದು ಅಥವಾ ಬಿಡುವುದು ನಿಮಗೆ ಬಿಟ್ಟ ವಿಚಾರ, ಆದರೆ ಕೊನೆಯಲ್ಲಿ ಹೇಳಲೇಬೇಕಾದ ಒಂದು ಮಾತೆಂದರೆ, ‘ಅನುಭವದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ; ವಿಜ್ಞಾನದಿಂದ ಜ್ಞಾನ ಅಥವಾ ಅನುಭವವಲ್ಲ!’
ಈ ಮೇಲೆ ಹೇಳಿದ ವಿಚಾರಗಳ ಬಗೆಗೆ ನಿಮ್ಮ ವಿಮರ್ಶೆಗಳಿಗೆ ಸ್ವಾಗತ!